Advertisement

ಚಾ.ನಗರ ನಮ್ಮ ಕಾಡು ಎಂಬ ಅಭಿಮಾನದ ಸಿಎಂರಾಮಯ್ಯ

01:13 PM May 20, 2023 | Team Udayavani |

ಚಾಮರಾಜನಗರ: ಅವಿಭಜಿತ ಮೈಸೂರು ಜಿಲ್ಲೆಯಲ್ಲಿದ್ದ ಚಾಮರಾಜನಗರದ ಬಗ್ಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪಾರ ಅಭಿಮಾನ. 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಸುಮಾರು 5 ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದರು. ಈಗ ಮತ್ತೆ ಮುಖ್ಯಮಂತ್ರಿಯಾಗಿ ಇನ್ನಷ್ಟು ಯೋಜನೆಗಳನ್ನು ನೀಡಲಿದ್ದಾರೆ ಎಂಬ ವಿಶ್ವಾಸ ಪಕ್ಷದ ಮುಖಂಡರು ಹಾಗೂ ಜನರಲ್ಲಿದೆ.

Advertisement

ಚಾ.ನಗರ ಪಟ್ಟಣ ಜನತೆ ಒಂದು ಮುಖ್ಯ ಕಾರಣಕ್ಕಾಗಿ ಸಿದ್ದರಾಮಯ್ಯರನ್ನು ನೆನೆಯುತ್ತಾರೆ. ಮುಖ್ಯಮಂತ್ರಿಯಾದವರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದರೆ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಮುರಿದು ಹಾಕಿದವರು ಸಿದ್ದರಾಮಯ್ಯ. ಪಟ್ಟಣಕ್ಕೆ 10ಕ್ಕೂ ಹೆಚ್ಚು ಬಾರಿ ಬಂದು ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಪೂರೈಸಿದರು. ತನ್ಮೂಲಕ ಅಧಿಕಾರ ಚ್ಯುತಿಗೆ ಒಂದು ಪಟ್ಟಣವನ್ನು ಹೊಣೆಮಾಡಲಾಗುತ್ತಿದ್ದ, ದೊಡ್ಡ ಮೂಢನಂಬಿಕೆಯೊಂದು ಕೊನೆಗೊಂಡಿತ್ತು.

10ಕ್ಕೂ ಹೆಚ್ಚು ಬಾರಿ ಭೇಟಿ: 2013ರಲ್ಲಿ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಸಿದ್ದರಾಮಯ್ಯ ತಾವು ಅಧಿಕಾರವಹಿಸಿಕೊಂಡ ಐದೇತಿಂಗಳಲ್ಲಿ ಚಾಮರಾಜನಗರಪಟ್ಟಣಕ್ಕೆ 2013ರ ಅಕ್ಟೋಬರ್‌ 7 ರಂದು ಭೇಟಿ ನೀಡಿ, ಮನಸ್ವಿನಿ, ಮೈತ್ರಿ ಯೋಜನೆಗೆ ಚಾಲನೆ ನೀಡಿದ್ದರು. ಬಳಿಕ ತಮ್ಮ ಐದು ವರ್ಷದ ಅವಧಿಯಲ್ಲಿ 10ಕ್ಕೂ ಹೆಚ್ಚು ಬಾರಿ ಚಾಮರಾಜನಗರ ಪಟ್ಟಣಕ್ಕೆ ಅಲ್ಲದೇ 20 ಬಾರಿ ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.

ಚಾಮರಾಜನಗರ ನಮ್ಮ ಕಾಡು ಎಂಬ ಅಭಿಮಾನ: ಈಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ನೆರೆಯ ಮೈಸೂರು ಜಿಲ್ಲೆಯವರಾದ ಸಿದ್ದರಾಮಯ್ಯ ಅವರಿಗೆ ಹಿಂದೆ ಮೈಸೂರು ಜಿಲ್ಲೆಯೊಳಗೇ ಇದ್ದ ಚಾಮರಾಜನಗರದ ಬಗ್ಗೆ ಅಪಾರ ಅಭಿಮಾನ.ಚಾಮರಾಜನಗರದವರಾದ ವರನಟ ಡಾ. ರಾಜ್‌ಕುಮಾರ್‌ ಸಿದ್ದರಾಮಯ್ಯನವರ ಬಗ್ಗೆ ಹಿಂದೊಮ್ಮೆ ನಮ್ಮ ಕಾಡಿನವರು ಎಂದು ಹೇಳಿದ್ದರು. ಹಾಗೆಯೇ ಸಿದ್ದರಾಮಯ್ಯನವರಿಗೆ ಚಾಮರಾಜನಗರ ನಮ್ಮ ಕಾಡು ಎಂಬ ಅಭಿಮಾನ ಇದೆ.

5000 ಕೋಟಿ ಅನುದಾನ ಬಿಡುಗಡೆ: ಹಾಗಾಗಿಯೇ ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸರ್ಕಾರಿ ವೈದ್ಯಕೀಯ ಕಾಲೇಜು, ವೈದ್ಯಕೀಯ ಕಾಲೇಜು ಆಸ್ಪತ್ರೆ, ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಕಾನೂನು ಕಾಲೇಜು, ಕೃಷಿ ಕಾಲೇಜು, ಚಾಮರಾಜನಗರ ಪಟ್ಟಣದ ರಸ್ತೆಗಳ ಅಭಿವೃದ್ಧಿ, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ, ಚಾಮುಲ್‌ ಹೀಗೆ ನಾನಾ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 5000 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಳೆದ ಸರ್ಕಾರದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕಿರಲಿಲ್ಲ. ಶನಿವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯಲ್ಲಿ ಮೂವರು ಶಾಸಕರು ಕಾಂಗ್ರೆಸ್‌ ನವರೇ ಇದ್ದು, ಅವರು ಶಿಫಾರಸು ಮಾಡಿ ತಂತಮ್ಮ ಕ್ಷೇತ್ರಗಳಿಗೆ ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ ಎಂಬ ಆಶಾಭಾವನೆ ಮತದಾರರಲ್ಲಿದೆ.

Advertisement

ಸಿದ್ದರಾಮಯ್ಯನವರು 2013ರಲ್ಲಿ ಸಿಎಂ ಆಗಿದ್ದಾಗ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದರು. ಈ ಬಾರಿ ಚಾಮರಾಜನಗರ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ, ವಿಶೇಷವಾಗಿ ರಸ್ತೆಗಳ ಅಭಿವೃದ್ಧಿ, ಆಶ್ರಯ ಮನೆಗಳು, ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶಗಳಿಗೆ ಹೊಸ ಉದ್ಯಮಗಳನ್ನು ತರುವುದು, ಹೊಸ ಕೆಎಸ್‌ ಆರ್‌ಟಿಸ ಬಸ್‌ ನಿಲ್ದಾಣ, ಮೊರಾರ್ಜಿ ಶಾಲೆಗಳ ಮಂಜೂರಾತಿ ಮಾಡಿಸುವ ಉದ್ದೇಶ ಹೊಂದಿದ್ದೇನೆ. -ಸಿ. ಪುಟ್ಟರಂಗಶೆಟ್ಟಿ, ಶಾಸಕ, ಚಾ.ನಗರ.

ಕಳೆದ ಬಾರಿ ಸಿದ್ದರಾಮಯ್ಯನವರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ. ಮಹದೇವಪ್ರಸಾದ್‌ ಅವರ ಸಲಹೆಯಂತೆ ಜಿಲ್ಲೆಗೆ ಅನೇಕ ಯೋಜನೆ ತಂದಿದ್ದರು. ಈ ಬಾರಿ ಅದಕ್ಕೆ ಪೂರಕವಾದ ರೀತಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನನ್ನ ಕೊಳ್ಳೇಗಾಲ ಕ್ಷೇತ್ರಕ್ಕೆ ತರಲು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಯವರು ಖಂಡಿತ ಸಹಕಾರ ನೀಡುವ ನಂಬಿಕೆ ಹೊಂದಿದ್ದೇನೆ. – ಎ.ಆರ್‌. ಕೃಷ್ಣಮೂರ್ತಿ, ಶಾಸಕ.

ಕೊಳ್ಳೇಗಾಲ ಕಳೆದ ಬಾರಿ ನಮ್ಮ ತಂದೆ ಮಹದೇವಪ್ರಸಾದ್‌ ಅವರೊಡಗೂಡಿ, ಸಿದ್ದರಾಮಯ್ಯನವರು ಗುಂಡ್ಲುಪೇಟೆ ಕ್ಷೇತ್ರ ಹಾಗೂ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದರು. ಈಗ, ನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ನನ್ನ ಆದ್ಯತೆ ನೀಡುತ್ತೇನೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿ, ಆಶ್ರಯ ಮನೆಗಳ ಹಂಚಿಕೆ, ಗಾರ್ಮೆಂಟ್‌ ಉದ್ಯಮಗಳನ್ನು ತರುವ ಉದ್ದೇಶ ಹೊಂದಿದ್ದೇನೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಲಿವೆ. -ಗಣೇಶ್‌ ಪ್ರಸಾದ್‌, ಶಾಸಕ, ಗುಂಡ್ಲುಪೇಟೆ

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next