Advertisement

CM ಆಯ್ಕೆ ವಿಚಾರ: ಇಕ್ಕಟ್ಟಿಗೆ ಸಿಲುಕಿದರೇ ಖರ್ಗೆ?

12:21 AM May 17, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರ ಅಭಿಪ್ರಾಯ ಆಲಿಸಿ ನೀವು ತೀರ್ಮಾನ ಕೈಗೊಳ್ಳಿ ಎಂದು ಹೇಳಿದ್ದಾರಾದರೂ, ಅತ್ತ ಸಿದ್ದರಾಮಯ್ಯ ಪರ ತಕ್ಕಡಿ ವಾಲಿದರೂ ಕಷ್ಟ, ಇತ್ತ ಡಿ.ಕೆ. ಶಿವಕುಮಾರ್‌ ಪರ ವಾಲಿದರೂ ಕಷ್ಟ ಎಂಬಂತಾಗಿದೆ.

Advertisement

ಮಲ್ಲಿಕಾರ್ಜುನ ಖರ್ಗೆ ಅವರು ಏನೇ ತೀರ್ಮಾನ ಕೈಗೊಂಡರೂ ಅದರಿಂದಾಗುವ ಮುಂದಿನ ಪರಿಣಾಮಗಳಿಗೂ ಅವರೇ ಹೊಣೆ ಆದಂತಾಗುತ್ತದೆ. ಹಾಗೆಂದು ಎಐಸಿಸಿ ಅಧ್ಯಕ್ಷರಾಗಿ ತೀರ್ಮಾನ ತೆಗೆದುಕೊಳ್ಳದಿರುವಂತೆಯೂ ಇಲ್ಲ. ಹೀಗಾಗಿ, ನಿಜಕ್ಕೂ ಈ ಪ್ರಹಸನದಲ್ಲಿ ಇಕ್ಕಟ್ಟಿಗೆ ಸಿಲುಕಿರುವವರು ಖರ್ಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಹಿಂದ ಮತ ಬ್ಯಾಂಕ್‌ ಸೆಳೆಯಲು ಸಿದ್ದರಾಮಯ್ಯ ಅವರೂ ಬೇಕು. ಒಕ್ಕಲಿಗ ಮತ ಸೆಳೆಯಲು ಹಾಗೂ ಪಕ್ಷ ಸಂಘಟನೆ ಗಟ್ಟಿಗೊಳಿಸಲು ಡಿ.ಕೆ. ಶಿವಕುಮಾರ್‌ ಸಹ ಬೇಕೇ ಬೇಕು. ಇಬ್ಬರೂ ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದು ಸಡಿಲಿಸಲು ಸಿದ್ಧರಿಲ್ಲ. ಹೀಗಾ ಗಿ ಖರ್ಗೆ ಅವರಿಗೂ ಒಮ್ಮತದ ಆಯ್ಕೆ ಸವಾಲಾಗಿ ಪರಿಣಮಿಸಿದೆ.

ಸಿದ್ದರಾಮಯ್ಯ ಅವರು ಶಾಸಕರ ಬೆಂಬಲ ಯಾರಿಗಿದೆ ಅವರಿಗೆ ಅವಕಾಶ ಎಂದು ಪಟ್ಟು ಹಿಡಿದರೆ, ಹೈಕಮಾಂಡ್‌ ತೀರ್ಮಾನಕ್ಕೆ ಎಂದು ಒಂದು ಸಾಲಿನ ನಿರ್ಣಯ ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ಅನಂತರ ಮತ್ತೆ ಸಂಖ್ಯಾಬಲದ ಮಾತು ಅಗತ್ಯವಿಲ್ಲ ಎಂಬುದು ಡಿ.ಕೆ. ಶಿವಕುಮಾರ್‌ ವಾದ. ಇಬ್ಬರ ವಾದವೂ ಸರಿಯೇ ಆದರೂ ರಾಜ್ಯದಲ್ಲಿ ಉತ್ತಮ ಸರಕಾರ ನೀಡಬೇಕಾದರೆ ಇಬ್ಬರೂ ಜತೆಯಾಗಿಯೇ ಮತ್ತೆ ಕೆಲಸ ಮಾಡಬೇಕಾಗಿದೆ.
ಸರಕಾರಕ್ಕೂ ಕಂಟಕ ತಪ್ಪಿದ್ದಲ್ಲ

ಖರ್ಗೆ ಅವರ ಮಾರ್ಗದರ್ಶನ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್‌ ನಾಯಕತ್ವದಲ್ಲಿ ಎಲ್ಲ ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಇಬ್ಬರಲ್ಲಿ ಒಬ್ಬರು ಮುನಿಸಿಕೊಂಡರೂ ದೊಡ್ಡ ಬಹುಮತ ಇದ್ದರೂ ಸರಕಾರಕ್ಕೂ ಕಂಟಕ ತಪ್ಪಿದ್ದಲ್ಲ, ಅನಂತರ ಪಕ್ಷದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಅಳೆದೂ ತೂಗಿ ಇಬ್ಬರಲ್ಲಿ ಒಬ್ಬರನ್ನು ಮನವೊಲಿಸಿಯೇ ತೀರ್ಮಾನ ಕೈಗೊಳ್ಳಬೇಕಾಗಿದೆ. ಮೂಲತಃ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಎರಡನೇ ಆಯ್ಕೆ ಇಬ್ಬರಿಗೂ ಇಲ್ಲ. ಮುಖ್ಯಮಂತ್ರಿ ಹುದ್ದೆಯೇ ಬೇಕು. ಅಧಿಕಾರ ಹಂಚಿಕೆ ಎಂದಾದರೆ ಮೊದಲ ಅವಧಿ ನಾನೇ ಆಗಬೇಕು ಎಂಬ ಬಿಗಿ ಪಟ್ಟು ಹಿಡಿದಿದ್ದಾರೆ.

ಕಬ್ಬಿಣದ ಕಡಲೆಯಂತಾಗಿದೆ
2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ಸ್ಪರ್ಧೆ ಇದ್ದಾಗ ಶಾಸಕರು ಹೆಚ್ಚು ಸಿದ್ದರಾಮಯ್ಯ ಪರ ಬೆಂಬಲ ವ್ಯಕ್ತಪಡಿಸಿದರು ಎಂದು ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಿದ್ದರು. ಈ ಬಾರಿಯೂ ಅದೇ ರೀತಿ ಆಗಬೇಕು ಎಂಬುದು ಸಿದ್ದರಾಮಯ್ಯ ಬಣದ ವಾದ. ಆದರೆ ಶಾಸಕರ ಸಂಖ್ಯೆಗಿಂತ ಪಕ್ಷ ಸಂಘಟನೆ, ಶ್ರಮ, ಹೊಣೆಗಾರಿಕೆ ಮುಖ್ಯ ಎಂಬುದು ಡಿ.ಕೆ. ಶಿವಕುಮಾರ್‌ ಬಣದ ವಾದ. ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವ ಸ್ಥಿತಿಯಲ್ಲೂ ಹೈಕಮಾಂಡ್‌ ಇಲ್ಲ. ಹೀಗಾಗಿ, ಹೈಕಮಾಂಡ್‌ಗೂ ಸಮಸ್ಯೆ ಬಗೆಹರಿಸುವುದು ಕಬ್ಬಿಣದ ಕಡಲೆಯಂತಾಗಿದೆ.

Advertisement

ಶಾಸಕರ ಅಭಿಪ್ರಾಯ ಬಹಿರಂಗಪಡಿಸಿ
ಗ್ಯಾರಂಟಿ ಕಾರ್ಡ್‌, ಸಾಮೂಹಿಕ ನಾಯಕತ್ವ ಎಂದು ಜಪಿಸಿ ಇದೀಗ ಮುಖ್ಯಮಂತ್ರಿ ಕುರ್ಚಿಗೆ ಇಬ್ಬರ ನಡುವೆ ಜಂಗೀಕುಸ್ತಿ ಆರಂಭವಾಗಿದೆ. ಇಬ್ಬರ ಪರವೂ ಶಾಸಕರಿದ್ದಾರೆ. ಜತೆಗೆ ಹಿರಿಯ ನಾಯಕರು ತಟಸ್ಥರಾಗಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ -ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲೇ ಶಾಸಕರ ಅಭಿಪ್ರಾಯ ಏನು ಎಂಬುದು ಬಹಿರಂಗವಾಗಲಿ. ಶಾಸಕರ ಬೆಂಬಲ ಇಲ್ಲ ಎಂದಾದರೆ ನಾನು ಹಿಂದೆ ಸರಿಯಲು ಸಿದ್ಧ ಎಂಬುದು ಸಿದ್ದರಾಮಯ್ಯ ಪ್ರತಿಪಾದನೆ ಎಂದು ಹೇಳಲಾಗಿದೆ.

ಡಿಕೆಶಿ ಭಾವನಾತ್ಮಕ ಅಸ್ತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಾಗ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಲಾಗಿತ್ತು. ಸೋನಿಯಾ ಗಾಂಧಿ-ಪ್ರಿಯಾಂಕಾ ಗಾಂಧಿ ಮಾತು ಕೊಟ್ಟಿದ್ದರು. ಪಕ್ಷ ನನಗೆ ದೇವಾಲಯ, ತಾಯಿ, ದೇವರು ಹೀಗಾಗಿ, ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ.

ಸಿದ್ದು ಡೆಮಾಕ್ರಟಿಕ್‌ ಸಿಸ್ಟಮ್‌
ನನ್ನ ನೇತೃತ್ವದಲ್ಲೇ ಚುನಾವಣೆ ಎಂದು ಘೋಷಿಸಿ ಎಂದು ಕೇಳಿದಾಗ, ಸಾಮೂಹಿಕ ನಾಯಕತ್ವ ಇರಲಿ. ಅಧಿಕಾರಕ್ಕೆ ಬಂದರೆ ನಿಮಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ರಾಹುಲ್‌ ಗಾಂಧಿ ನನಗೆ ಭರವಸೆ ನೀಡಿದ್ದರು. ಅದರಂತೆ ಕೇಳುತ್ತಿದ್ದೇನೆ, ಅಲ್ಲದೆ ಶಾಸಕರ ಬೆಂಬಲ ನನಗೆ ಹೆಚ್ಚಾಗಿದೆ. ಪ್ರಜಾಪ್ರಭುತ ವ್ಯವಸ್ಥೆಯಡಿ ತೀರ್ಮಾನ ಆಗಲಿ ಎಂದು ಸಿದ್ದರಾಮಯ್ಯ ಡೆಮಾಕ್ರಟಿಕ್‌ ಸಿಸ್ಟಮ್‌ ಅಸ್ತ್ರ ಬಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next