ಬೆಂಗಳೂರು: ರಾಜ್ಯ ಬಜೆಟ್ ರೈತಪರ ಇರಬೇಕು. ರೈತರ ಸಾಲ ಮನ್ನಾ ಯೋಜನೆಯ ಷರತ್ತು ಸಡಿಲಿಸಿ, ಹೊಸ ಸಾಲ ಕೊಡಲು ಡಿಸಿಸಿ ಬ್ಯಾಂಕುಗಳಿಗೆ ಸೂಚನೆ ನೀಡಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂಬ ಬೇಡಿಕೆಗಳನ್ನು ರೈತ ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಮುಂದಿಟ್ಟಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಬಜೆಟ್ ರೈತಪರ ಇರಬೇಕು. ಅನುಷ್ಠಾನಗೊಳಿಸುವಂತಹ ಕಾರ್ಯಕ್ರಮಗಳನ್ನು ಮಾತ್ರ ಘೋಷಿಸಬೇಕು. ಸಾಲ ಮನ್ನಾ ಕುರಿತ ಷರತ್ತು ಸಡಿಲಿಸಬೇಕು. ಕಬ್ಬು ಪೂರೈಕೆ ಹಣವನ್ನು ನಿಗದಿತ ಸಮಯದಲ್ಲಿ ಪಾವತಿಸಿದ ಸಕ್ಕರೆ ಕಾರ್ಖಾನೆಯ ಮಾಲೀಕರನ್ನು ಜೈಲಿಗೆ ಕಳುಹಿಸುವ ಕಾನೂನು ಜಾರಿಗೊಳಿಸಬೇಕು ಎಂಬ ಆಗ್ರಹಿಸಿದರು.
ಮಹಿಳಾ ರೈತರಿಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಬೇಕು. ಯಶಸ್ವಿನಿ ಯೋಜನೆಯನ್ನು ಹಿಂದಿನಂತೆಯೇ ಜಾರಿಗೊಳಿಸಬೇಕು. ಇಸ್ರೇಲ್ ಮಾದರಿ ಕೃಷಿಯನ್ನು ಚಿಕ್ಕಮಗಳೂರಿನಲ್ಲಿಯೂ ಜಾರಿಗೊಳಿಸಬೇಕು. ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮ್ಯಾಟೋ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂಬ ಬೇಡಿಕೆಗಳು ಕೇಳಿ ಬಂದವು. ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು ಸಭೆಯಲ್ಲಿ ತಮಗೆ ಮಾತನಾಡಲು ಹೆಚ್ಚು ಅವಕಾಶ ಸಿಗದ ಬಗ್ಗೆಯೂ ಅಸಮಾಧಾನ ಹೊರಹಾಕಿ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು.
ಷರತ್ತು ಸಡಿಲಿಸಿ: ಸಭೆಯ ನಂತರ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಾಲ ಮನ್ನಾ ವಿಚಾರದಲ್ಲಿ ಸಹಕಾರ ಅಥವಾ ರಾಷ್ಟ್ರೀಕೃತ ಎರಡಲ್ಲಿ ಒಂದು ಕಡೆ ತೆಗೆದುಕೊಂಡ ಸಾಲ ಮಾತ್ರ ಮನ್ನಾ ಎಂಬ ಷರತ್ತು ವಿಧಿಸಲಾಗಿದೆ. ಆ ರೀತಿಯ ಷರತ್ತು ವಿಧಿಸಬಾರದು. ಕಬ್ಬು ಪೂರೈಕೆ ಹಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಸಾವಿರ ಕೋಟಿ ರೂ.ಉಳಿಸಿಕೊಂಡಿದ್ದಾರೆ. ಹೀಗಾಗಿ, ನಿಗದಿತ ಸಮಯದಲ್ಲಿ ಬಾಕಿ ಪಾವತಿಸದವರನ್ನು ಜೈಲಿಗೆ ಕಳುಹಿಸುವ ಕಾನೂನು ಜಾರಿಗೊಳಿಸಬೇಕು. ಬಜೆಟ್‌ನಲ್ಲಿ ಅನುಷ್ಟಾನಗೊಳಿಸಬಹುದಾದ ಕಾರ್ಯಕ್ರಮಗಳನ್ನು ಮಾತ್ರ ಘೋಷಿಸಿ. ಪುಸ್ತಕದಲ್ಲೇ ಉಳಿಯುವ ಯೋಜನೆ ಬೇಡ ಎಂದು ಹೇಳಿದರು. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೃಷಿ, ನೀರಾವರಿ, ರೇಷ್ಮೆ, ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಸ್ತ ರೈತರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬೇಕು. ಬಜೆಟ್‌ನಲ್ಲಿ ರೈತ ವಿರೋಧಿ ಕಾರ್ಯಕ್ರಮಗಳಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ
ನೀಡಿದರು.
ಭಾವನಾ ಮನವಿ: ಸಭೆಯಲ್ಲಿ ಭಾಗವಹಿಸಿದ್ದ ಚಿತ್ರ ನಟಿ ಭಾವನಾ, ಮುಂಬರುವ ಬಜೆಟ್‌ನಲ್ಲಿ ಮೀನುಗಾರರಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣ ಹೆಚ್ಚಳ ಮಾಡಲು ಮನವಿ ಮಾಡಿದರು. ಜತೆಗೆ, ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್‌ನ್ನು ಸಂಬಂಧಪಟ್ಟ ಸಹಕಾರ ಸಂಘಗಳು ಭರಿಸಬೇಕು ಎಂಬ ಸರ್ಕಾರದ ನಿಯಮ ಸಡಿಲಿಸುವಂತೆಯೂ ಕೋರಿಕೆ ಸಲ್ಲಿಸಿದರು.
ಅಧಿಕಾರಿಗಳು ಮಾತು ಕೇಳಲ್ಲ
ರೈತರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಅಭಿಲಾಷೆ ಇದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಬಿಜೆಪಿಯವರು ಆಗಾಗ್ಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿರುವುದರಿಂದ ಇವರು ಎಷ್ಟು ದಿನ ಇರ್ತಾರೋ ಎಂಬ ಭಾವನೆಯಲ್ಲಿ ಕೆಲವು ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ. ಇತ್ತ ಸರ್ಕಾರ ಉಳಿಸಿಕೊಳ್ಳಬೇಕಾಗಿದೆ. ರೈತರು ಸೇರಿ ರಾಜ್ಯದ ಜನರ ಸಂಕಷ್ಟಕ್ಕೂ ಸ್ಪಂದಿಸಬೇಕಿದೆ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಳಲು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ರೈತ ಮುಖಂಡರು ಪ್ರಸ್ತಾಪಿಸಿದ ಎಲ್ಲ ಬೇಡಿಕೆ ಹಾಗೂ ವಿಚಾರಗಳ ಬಗ್ಗೆಯೂ ಕೇಳಿಸಿಕೊಂಡಿದ್ದೇನೆ. ಬಿತ್ತನೆ ಬೀಜ ಪೂರೈಕೆ, ಸಾಲ ಮನ್ನಾ, ಕಬ್ಬು ಪೂರೈಕೆ ಹಣ ಬಿಡುಗಡೆ, ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಸಮಸ್ಯೆ ಎಲ್ಲದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸಲಹೆ-ಸೂಚನೆ ಪಡೆದಿದ್ದೇನೆ. ಬಜೆಟ್‌ನಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ. ನಮ್ಮದು ರೈತಪರ ಬಜೆಟ್ ಆಗಿರಲಿದೆ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ರೈತರಿಗೆ ಅನುಕೂಲವಾಗುವ ಹಲವು ವಿನೂತನ ಯೋಜನೆಗಳು ಬಜೆಟ್‌ನಲ್ಲಿ ಇರಲಿವೆ. ಸಾಲ ಮನ್ನಾ ಹೊರತುಪಡಿಸಿ ರೈತರಿಗೆ ಅನುಕೂಲವಾಗುವ ಹಲವಾರು ಕಾರ್ಯಕ್ರಮಗಳು ಘೋಷಣೆಯಾಗಲಿವೆ. ಸಭೆಯಲ್ಲಿ ರೈತರು ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ಅವೆಲ್ಲವನ್ನೂ ಪರಿಗಣಿಸಿ ಮುಖ್ಯಮಂತ್ರಿಯವರು ಬಜೆಟ್ ಮಂಡನೆ ಮಾಡಲಿದ್ದಾರೆ.
●ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ