Advertisement

ಸಿಎಂ ಸಭೆ ಅಪೂರ್ಣ, ಅಂತ್ಯ ಕಾಣದ ಸಮಸ್ಯೆ 

06:00 AM Dec 14, 2018 | Team Udayavani |

ಬೆಳಗಾವಿ: ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರು ಗುರುವಾರ ಸುವರ್ಣ ವಿಧಾನಸೌಧದೆದುರು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ಮತ್ತೂಂದು
ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಆದರೆ, ಸಭೆ ಅಪೂರ್ಣವಾಗಿದ್ದರಿಂದ ಸರಕಾರ, ರೈತರ ನಡುವಿನ ಸಮಸ್ಯೆ ಇನ್ನೂ ಅಂತ್ಯ ಕಂಡಿಲ್ಲ. ಕಬ್ಬಿನ ಬಾಕಿ ಬಿಲ್‌ ಹಾಗೂ ಎಫ್‌ಆರ್‌ಪಿ ದರಕ್ಕಾಗಿ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸುವರ್ಣ
ವಿಧಾನಸೌಧದಲ್ಲಿ ರೈತ ಮುಖಂಡರ ಸಭೆ ಬಳಿಕ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಭೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೂ ಇರಲಿದ್ದಾರೆ. ಬಾಕಿ ಬಿಲ್‌ ಪಾವತಿ ಬಗ್ಗೆ
ಚರ್ಚಿಸಿ, ರೈತರ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮತ್ತೂಂದು ಸಭೆ ನಡೆಸಲಾಗುವುದು. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮತ್ತೂಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸುವರ್ಣ
ವಿಧಾನಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಸುವರ್ಣ ಸೌಧ ಎದುರಿನ ಕೊಂಡಸಕೊಪ್ಪ ಗ್ರಾಮದ ಗುಡ್ಡದ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸಿದ ರೈತರು ಮುಖ್ಯಮಂತ್ರಿ ಆಗಮನಕ್ಕೆ ಪಟ್ಟು ಹಿಡಿದರು. ಮಧ್ಯಾಹ್ನ ಊಟ ಮಾಡಿ ಮತ್ತೆ ಪ್ರತಿಭಟನೆ
ಮುಂದುವರಿಸಿ, ಮುಖ್ಯಮಂತ್ರಿಗಳು ಬಾರದ್ದಕ್ಕೆ ರೊಚ್ಚಿಗೆದ್ದು ಕೆಲ ರೈತರು ಬ್ಯಾರಿಕೇಡ್‌ ಹಾಗೂ ಆವರಣದ ಗೇಟ್‌ಗಳನ್ನು ತಳ್ಳಿ, ಪೊಲೀಸರನ್ನು ನೂಕಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಧಾವಿಸಿದರು. ಈ ವೇಳೆ, ಹೆದ್ದಾರಿ ಸಮೀಪ ಬಂದಾಗ ಕೆಲಕಾಲ
ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ರೈತರನ್ನು ತಡೆದು ಪ್ರತಿಭಟನಾ ಸ್ಥಳಕ್ಕೆ ವಾಪಸ್‌ ಕಳುಹಿಸಿದರು.

ಪಾದಯಾತ್ರೆಗೆ ತಡೆ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ರೈತರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ತಡೆದರು. ಸಚಿವರು ಹಾಗೂ ಗಣ್ಯರ ವಾಹನಗಳ ಸಂಚಾರದ ವೇಳೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಪಾದ ಯಾತ್ರೆಗೆ ಪೊಲೀಸರು ಅವಕಾಶ ಮಾಡಿ ಕೊಡಲಿಲ್ಲ. ಬೆಳಗ್ಗೆ 9:30ಕ್ಕೆ ಪಾದಯಾತ್ರೆ ಆರಂಭಿಸಿದಾಗ ಪಾದಯಾತ್ರೆ ನಡೆಸದಂತೆ ಪೊಲೀಸರು ಎಲ್ಲ ರೈತರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದುಕೊಂಡು ಸುವರ್ಣ ವಿಧಾನಸೌಧ ಎದುರಿನ ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳಕ್ಕೆ  ಬಿಟ್ಟರು.
 

Advertisement

Udayavani is now on Telegram. Click here to join our channel and stay updated with the latest news.

Next