Advertisement

ಡಿಸಿ,ಸಿಇಓ ಜತೆ ಇಂದಿನಿಂದ ಸಿಎಂ ಮ್ಯಾರಥಾನ್‌ ಸಭೆ

06:00 AM Jul 30, 2018 | Team Udayavani |

ಬೆಂಗಳೂರು: ಆಡಳಿತಕ್ಕೆ ಚುರುಕು ಮುಟ್ಟಿಸಲು ಮತ್ತು ರೈತರ ಸಾಲ ಮನ್ನಾ ಯೋಜನೆಯ ಸಮರ್ಪಕ ಜಾರಿ ಕುರಿತಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ಮತ್ತು ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ (ಸಿಇಓ) ಸಭೆ ನಡೆಸಲಿದ್ದಾರೆ.

Advertisement

ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆರಂಭವಾಗಲಿದ್ದು, ಮಂಗಳವಾರ ಸಂಜೆಯವರೆಗೆ ಮುಂದುವರಿಯಲಿದೆ. ಸಭೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದರೊಂದಿಗೆ ರಾಜ್ಯದಲ್ಲಿ ಶೂನ್ಯ ಬಂಡವಾಳ ಕೃಷಿ ಬಗ್ಗೆಯೂ ಮಹಾರಾಷ್ಟ್ರದ ತಜ್ಞರೊಬ್ಬರಿಂದ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳಿಗೆ ಮಾಹಿತಿ ಕೊಡಿಸಲಾಗುತ್ತದೆ. ಸಭೆಯಲ್ಲಿ ವಿವಿಧ ಇಲಾಖೆಗಳ ಸಚಿವರು, ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಮುಖ್ಯಮಂತ್ರಿಗಳು ಜಿಲ್ಲಾವಾರು ಪ್ರಗತಿ ಪರಿಶೀಲನೆ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಜತೆಗೆ ಸ್ಥಳೀಯ ಮಟ್ಟದಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಬಗ್ಗೆ ಅಧಿಕಾರಿಗಳ ಮುಖಾಂತರ ಸೂಚನೆಗಳನ್ನು ನೀಡಲಿದ್ದಾರೆ.

ರೈತರ ಸಾಲ ಮನ್ನಾ ಯೋಜನೆ ಜಾರಿಗೆ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳ ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ಹೀಗಾಗಿ ಯೋಜನೆ ಜಾರಿಯಾದ ಬಳಿಕ ಯಾವ ರೀತಿ ಅದನ್ನು ಅನುಷ್ಠಾನಗೊಳಿಸಬೇಕು. ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಯೋಜನೆಯನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಉಳಿದಂತೆ ಇತ್ತೀಚೆಗೆ ಬಿದ್ದಿರುವ ಭಾರೀ ಮಳೆಯಿಂದ ಆಗಿರುವ ಅನಾಹುತ, ಜೀವಹಾನಿ, ಆಸ್ತಿ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿರುವ ಮುಖ್ಯಮಂತ್ರಿಗಳು, ಪರಿಹಾರ ಕಾರ್ಯಗಳ ಬಗ್ಗೆಯೂ ಪರಿಶೀಲಿಸಲಿದ್ದಾರೆ. ಅಲ್ಲದೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜತೆಗೆ ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸೂಚನೆಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಇದಲ್ಲದೆ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸುತ್ತಿರುವ ಯೋಜನೆಗಳ ಅನುಷ್ಠಾನ, ಯೋಜನೆಗಳಿಗೆ ಮಂಜೂರಾಗಿರುವ ಅನುದಾನದ ವೆಚ್ಚಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಲದೆ, ಮಿತವ್ಯಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನಿರ್ದೇಶನ ನೀಡಲಾಗುತ್ತದೆ.

ಶೂನ್ಯ ಬಂಡವಾಳ ಕೃಷಿ ಬಗ್ಗೆ ಮಾಹಿತಿ:
ರಾಜ್ಯದಲ್ಲಿ ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಲು ನಿರ್ಧರಿಸಿರುವ ಸರ್ಕಾರ ಈ ಕುರಿತಂತೆ ಜಿಲ್ಲಾಧಿಕಾರಿ ಮತ್ತು ಸಿಇಓಗಳಿಗೂ ಈ ಕುರಿತು ಮಾಹಿತಿ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ ಮಹಾರಾಷ್ಟ್ರದಿಂದ ತಜ್ಞರೊಬ್ಬರು ಆಗಮಿಸುತ್ತಿದ್ದು, ಮಂಗಳವಾರ (ಜು.31) ಸಭೆಯಲ್ಲಿ ಶೂನ್ಯ ಬಂಡವಾಳ ಕೃಷಿ ಕೈಗೊಳ್ಳುವ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜತೆಗೆ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು? ಆಡಳಿತ ಯಂತ್ರ ಯಾವ ರೀತಿ ಸಹಕರಿಸಬೇಕು ಎಂಬ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next