ಕೋಲ್ಕತ : ಬಹು ಕೋಟಿ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಸಿಬಿಐ ವರ್ಸಸ್ ಮಮತಾ ಬ್ಯಾನರ್ಜಿ ಸಂಘರ್ಷ ತಾರಕಕ್ಕೇರಿರುವಂತೆಯೇ ಇಂದು ಸಿಎಂ ಮಮತಾ ಅವರ ಧರಣಿ ಸತ್ಯಾಗ್ರಹ ಮೂರನೇ ದಿನ ತಲುಪಿದ್ದು ಇದು ಫೆ.8ರ ವರೆಗೂ ನಡೆಯಲಿದೆ ಎಂದು ಖುದ್ದು ಮುಖ್ಯಮಂತ್ರಿ ಮಮತಾ ಅವರೇ ಪ್ರಕಟಿಸಿದರು.
‘ಸಂವಿಧಾನ ಮತ್ತು ದೇಶವನ್ನು ಉಳಿಸುವುದೇ ನನ್ನ ಈ ಧರಣಿ ಸತ್ಯಾಗ್ರಹದ ಗುರಿಯಾಗಿದೆ’ ಎಂದು ಮುಖ್ಯಮಂತ್ರಿ ಮಮತಾ ಹೇಳಿಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ವಸ್ತುತಃ ದೇಶದ ಎಲ್ಲ ವಿರೋಧ ಪಕ್ಷಗಳು ಕೇಂದ್ರದಲ್ಲಿನ ಮೋದಿ ಸರಕಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ಪ್ರಕಟಿಸಿವೆ.
ಆದರೆ ರಾಜಕೀಯ ವಲಯದಲ್ಲಿನ ಒಂದು ವಿಶ್ಲೇಷಣೆಯ ಪ್ರಕಾರ ಮಮತಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯುವ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟಕ್ಕೆ ‘ನಾನೇ ನೇತಾರೆ, ನಾನೇ ಪ್ರಧಾನಿ ಅಭ್ಯರ್ಥಿ’ ಎಂದು ತನ್ನ ಈ ಧರಣಿ ಸತ್ಯಾಗ್ರಹದ ಮೂಲಕ ಬಿಂಬಿಸುವ ಹನ್ನಾರ ಹೊಂದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಬಿಜೆಪಿ, ವಿಪಕ್ಷಗಳ ಮೈತ್ರಿಕೂಟವನ್ನು ಭ್ರಷ್ಟರ ಮೈತ್ರಿಕೂಟ ಎಂದು ಕರೆದಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಲದಲ್ಲಿನ ಈ ಬೆಳವಣಿಗೆಗಳು ಅಭೂತಪೂರ್ವಮತ್ತು ದುರದೃಷ್ಟಕರ ಎಂದಿದ್ದಾರಲ್ಲದೆ ಸಂವಿಧಾನ ಕುಸಿದು ಬಿದ್ದಿರುವುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಮಮತಾ ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಇಂದು ಟಿಎಂಸಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ಸುಟ್ಟು ರೈಲುಗಳನ್ನು ತಡೆದು ಅಕ್ರೋಶ ಮೆರೆದಿದ್ದಾರೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ತನ್ನ ಉನ್ನತ ನಾಯಕರನ್ನು ಸಾಲುಗಟ್ಟಿಸಿ ಮಮತಾ ಮತ್ತು ವಿಪಕ್ಷ ನಾಯಕರ ವಾಗ್ಧಾಳಿಗೆ ಉತ್ತರ ನೀಡುವಂತೆ ಮಾಡಿದ್ದಾರೆ.