Advertisement

ಸಿಎಂ ಜನತಾ ದರ್ಶನ; ಸಮಸ್ಯೆಗಳ ದಿಗ್ದರ್ಶನ

06:20 AM Sep 02, 2018 | Team Udayavani |

ಬೆಂಗಳೂರು: ಹಲವು ವಾರಗಳ ಬಳಿಕ ಮತ್ತೆ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಶನಿವಾರ ಜನಸಾಮಾನ್ಯರ ಸಮಸ್ಯೆಗಳ ದಿಗ್ದರ್ಶನವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಜನ ನಾಡಿನ ದೊರೆಯ ಎದುರು ತಮ್ಮ ಅಳಲು ತೋಡಿಕೊಂಡ ಪರಿ, ಜಡ್ಡುಗಟ್ಟಿದ ಸ್ಥಳೀಯ ಆಡಳಿತ ವ್ಯವಸ್ಥೆಯ ನಗ್ನ ದರ್ಶನ ಮಾಡಿಸುವಂತಿತ್ತು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗೃಹ ಕಚೇರಿ ಕೃಷ್ಣಾ, ಜೆ.ಪಿ.ನಗರದಲ್ಲಿರುವ ಖಾಸಗಿ ವಾಸದ ಮನೆಯಲ್ಲಿ ನಿಯಮಿತವಾಗಿ ಜನತಾದರ್ಶನ ನಡೆಸುತ್ತಾ ಬಂದಿದ್ದರು.
ಬಳಿಕ, ಜನ ಜಾಸ್ತಿಯಾಗುತ್ತಿದ್ದಂತೆ ಜನತಾದರ್ಶನ ನಡೆಸಲು ಆಗಿರಲಿಲ್ಲ.

Advertisement

ಈಗ ವ್ಯವಸ್ಥಿತವಾಗಿ ಜನತಾ ದರ್ಶನ ನಡೆಸಲು ಮುಂದಾಗಿರುವ ಸಿಎಂ, ಬೆಂಗಳೂರಲ್ಲಿ ಇದ್ದಾಗ ಪ್ರತಿ ಶನಿವಾರ ಜನತಾದರ್ಶನ ನಡೆಸಲು ತೀರ್ಮಾನಿಸಿದ್ದಾರೆ. ಅದರಂತೆ, ಶನಿವಾರ ಮೊದಲ ವ್ಯವಸ್ಥಿತ ಜನತಾ ದರ್ಶನ ನಡೆಯಿತು.

ಬೆಳಗ್ಗೆ 11ರಿಂದ 4.30ರವರೆಗೆ ಜನತಾ ದರ್ಶನಕ್ಕೆ ಸಮಯ ನಿಗದಿಯಾಗಿತ್ತು. ಮಧ್ಯಾಹ್ನ 12ರ ವೇಳೆಗೆ ಆಗಮಿಸಿದ ಕುಮಾರಸ್ವಾಮಿ, ಮೊದಲು ವಿಕಲಚೇತನರಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಮನವಿಗಳನ್ನು ಆಲಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಬಳಿಕ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಅಹವಾಲುಗಳನ್ನು ಕೇಳಿದರು. ಬಳಿಕ, ಗೃಹ ಕಚೇರಿಯ ತಮ್ಮ ಕೊಠಡಿಯಲ್ಲಿ ಕೆಲವು ಮಹತ್ವದ ಕಡಿತಗಳ ವಿಲೇವಾರಿ ಮಾಡಿದರು. ಇದೇ ವೇಳೆ, ಅಡ್ವೋಕೇಟ್‌ನ ಜನರಲ್‌ ಅವರೊಂದಿಗೆ ಹೈಕೋರ್ಟ್‌ನಲ್ಲಿರುವ ಬಿಡಿಎಗೆ ಸಂಬಂಧಿಸಿದ ಪ್ರಕರಣವೊಂದರ ಬಗ್ಗೆ ಸಮಾಲೋಚನೆ ನಡೆಸಿದರು. ಮಧ್ಯಾಹ್ನ 3.30ರ ವೇಳೆಗೆ ಬ್ರೆಡ್‌, ಸ್ಯಾಂಡ್‌ ವಿಚ್‌ ಸೇವಿಸಿದ ಮುಖ್ಯಮಂತ್ರಿ ಪುನಃ ಜನತಾ ದರ್ಶನದ ಮನವಿಗಳನ್ನು ಆಲಿಸಿದರು.

ಅಧಿಕಾರಿಗಳಿಗೆ ತರಾಟೆ: ಪ್ರತಿಯೊಬ್ಬರ ಆಳಲನ್ನು ಸಮಾಧಾನದಿಂದ ಕೇಳಿದ ಸಿಎಂ, ಸ್ಥಳದಲ್ಲೇ 200ಕ್ಕೂ ಹೆಚ್ಚು ಫೋನ್‌ ಕರೆಗಳನ್ನು ಮಾಡಿ, ಅರ್ಜಿಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೆಲವೊಂದು ಪ್ರಕರಣಗಳನ್ನು ಫಾಲೋ ಮಾಡಿ ಎಂದು ತಮ್ಮ ಆಪ್ತ ಸಿಬ್ಬಂದಿಗೆ ತಿಳಿಸಿದರು. ಇದೇ ವೇಳೆ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

Advertisement

ಅಚ್ಚುಕಟ್ಟಾದ ವ್ಯವಸ್ಥೆ: ಜನತಾ ದರ್ಶನಕ್ಕೆ ಬಂದ ಸಾರ್ವಜನಿಕರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಮನವಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆ ಗುರುತಿಸಿ ಅವರಿಗೆ ಟೋಕನ್‌ ನಂಬರ್‌ ನೀಡಲಾಗಿತ್ತು. ಅದರ ಪ್ರಕಾರವೇ ಅವರಿಗೆ ಭೇಟಿಗೆ ಅವಕಾಶ ಕೊಡಲಾಗುತ್ತಿತ್ತು. ದಿವ್ಯಾಂಗರು, ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬಂದವರಿಗೆ ಉಪಾಹಾರ, ಟೀ, ಬಿಸ್ಕತ್‌ ವ್ಯವಸ್ಥೆ ಸಹ ಇತ್ತು. 

ಸಂತ್ರಸ್ತರಿಗೆ ದೇಣಿಗೆ
ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಜತೆಗೆ ಆಗಮಿಸಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಉದ್ಯಮಿ ಬಿ.ಆರ್‌. ಶೆಟ್ಟಿ, ಅವರ ಸಹೋದರ, ಕೊಡಗು ಸಂತ್ರಸ್ತರಿಗಾಗಿ ಬಂಟರ ಸಂಘದಿಂದ 1 ಕೋಟಿ ರೂ. ದೇಣಿಗೆ ನೀಡಿದರು. ಇದೇ
ವೇಳೆ ಶೃಂಗೇರಿ ಮಠದಿಂದ ಕೊಡಗು ಸಂತ್ರಸ್ತರಿಗೆ 11 ಲಕ್ಷ ರೂ. ನೆರವು ಕೊಡಲಾಗಿದೆ, ಅದಕ್ಕಾಗಿ ಶೃಂಗೇರಿ
ಗುರುಗಳಿಗೆಇಲ್ಲಿಂದಲೇ ನಮಿಸುತ್ತೇನೆಂದು ಕುಮಾರಸ್ವಾಮಿ ಹೇಳಿದರು. ಇಲ್ಲಿವರೆಗೆ 138 ಕೋಟಿ ರೂ. ಸಂಗ್ರಹವಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next