ಬೆಂಗಳೂರು: ಹಾಲು ಹಾಗೂ ಮೊಸರಿನ ದರ ಏರಿಕೆ ಚೆಂಡು ಮತ್ತೆ ಕೆಎಂಎಫ್ ಅಂಗಳಕ್ಕೆ ಬಿದ್ದಿದೆ. ರೈತರಿಗೆ ತೊಂದರೆ ಆಗದಂತೆ ಹಾಗೂ ಗ್ರಾಹಕರಿಗೂ ಹೊರೆಯಾಗದಂತೆ ಸೂತ್ರ ರಚಿಸಿ ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ದರ ಏರಿಕೆ ಬಗ್ಗೆ ಮತ್ತೂಮ್ಮೆ ಸಭೆ ನಡೆಸಿ ಸರ್ವಸಮ್ಮತ ಸೂತ್ರ ರಚಿಸಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ.
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಬೇರೆ ಬೇರೆ ರಾಜ್ಯಗಳಲ್ಲಿ ಎಷ್ಟು ದರ ಇದೆ. ಹಾಲು ಉತ್ಪಾದನೆ ವೆಚ್ಚ, ಯಾಕೆ ದರ ಹೆಚ್ಚಳ ಮತ್ತಿತರ ಮಾಹಿತಿ ಪಡೆದಿದ್ದೇನೆ. ರೈತರಿಗೆ ತೊಂದರೆಯಾಗದಂತೆ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಸೂತ್ರ ರಚಿಸಿ ತೀರ್ಮಾನ ಕೈಗೊಳ್ಳಿ ಎಂದು ಹೇಳಿದ್ದೇನೆ. ಕೆಎಂಎಫ್ ನವರು 2 ದಿನ ಸಮಯ ಪಡೆದುಕೊಂಡಿದ್ದು, ತೀರ್ಮಾನ ಕೈಗೊಳ್ಳಲಿ ದ್ದಾರೆ. ಹಿಂದಿನ ದರ ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಹೀಗಾಗಿ ಬಹುತೇಕ ಪ್ರತಿ ಲೀ. 2 ರೂ. ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಕಳೆದ ವಾರ ಹಾಲು ಮತ್ತು ಮೊಸರು ದರ ಪ್ರತಿ ಲೀ.ಗೆ 3 ರೂ. ಹೆಚ್ಚಿಸಲು ಕೆಎಂಎಫ್ ತೀರ್ಮಾನ ಕೈಗೊಂಡಿತ್ತು. ಅದಕ್ಕೆ ಮುಖ್ಯಮಂತ್ರಿ ತಡೆ ನೀಡಿದ್ದರು.