ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಭಾಗದ ವಿವಿಧ ಕಾಮಗಾರಿಗಳ ಅನಿರೀಕ್ಷಿತ ತಪಾಸಣೆ ನಡೆಸಿದರು.
ರಾಷ್ಟ್ರಪತಿಗಳನ್ನು ಬೀಳ್ಕೊಟ್ಟು, ಈ ಭಾಗದಲ್ಲಿ ವಿಶೇಷವಾಗಿ ಹೊರವರ್ತುಲ ರಸ್ತೆ ಮತ್ತು ಕೆಲವು ಪ್ರಮುಖ ರಸ್ತೆಗಳ ಸಂಚಾರ ದಟ್ಟಣೆ ನಿವಾರಣೆಗಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿದರು. ಆ ಯೋಜನೆಗಳ ಸಮಗ್ರ ವಿವರವನ್ನು ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಪಡೆದರು.
ನಂತರ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸರ್ಜಾಪುರ, ಮಾರತಹಳ್ಳಿ, ಎಚ್ ಎಸ್ ಆರ್ ಬಡಾವಣೆಗಳಿಗೆ ತೆರಳಿ ಕಾಮಗಾರಿಗಳ ವಸ್ತು ಸ್ಥಿತಿಯನ್ನು ಅರಿತು ಅಧಿಕಾರಿಗಳಿಗೆ ಕಾಮಗಾರಿಗಳ ನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಸೂಚಿಸಿದರು.
ಮೊದಲು ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಮಾರತಹಳ್ಳಿ ಬ್ರಿಡ್ಜ್ ಗೆ ಭೇಟಿ ನೀಡಿದರು. ನಂತರ ಕುಂದಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದರು.
Related Articles
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಐಟಿ ಕಂಪನಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಎಲ್ಲರೂ ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ಆದ್ದರಿಂದ ತ್ವರಿತಗತಿಯಲ್ಲಿ ಕಾಮಗಾರಿ ಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿದರು.
ಪಣತ್ತೂರು ರೈಲ್ವೆ ಕೆಳಸೇತುವೆ ಬಳಿ ರಸ್ತೆ ಅಗಲೀಕರಣ ಕಾಮಗಾರಿ, ಹೊಸದಾಗಿ ಮಾಡುತ್ತಿರುವ ವಿಎಸ್ಎಸ್ ರಸ್ತೆ, ಜಕ್ಕಸಂದ್ರ ರಸ್ತೆ ಮೊದಲಾದವುಗಳ ತಪಾಸಣೆ ನಡೆಸಿ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಆರ್ ಟಿ ನಗರ ನಿವಾಸಕ್ಕೆ ಹಿಂದಿರುಗಿದರು.
ಐಟಿ ವಲಯವಾಗಿರುವ ಈ ಭಾಗದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಕಾನೂನು ತೊಡಕು ಅಥವಾ ಇನ್ಯಾವುದೇ ಸವಾಲುಗಳಿದ್ದಲ್ಲಿ, ಅವುಗಳನ್ನು ಬಗೆಹರಿಸಿ ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬಿಬಿಎಂಪಿಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.