Advertisement
ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಜಗಾಟ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸುಮಾರು 13 ಕುಟುಂಬಗಳ ಜನ ಇಲ್ಲಿ ನೂರಾರು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ.
Related Articles
Advertisement
ಗ್ರಾಮದ ಜನರು ಹೊಳೆ ದಾಟಲು ಜನ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಪ್ರತಿ ವರ್ಷ ಎರಡು ಬಾರಿ ಸೇತುವೆ ದುರಸ್ತಿ ಮಾಡಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಬೆತ್ತಕ್ಕಾಗಿ ಗ್ರಾಮಸ್ಥರು ಕಾಡಿಗೆ ಹೋಗಿ ಕಾಡು ಪ್ರಾಣಿಗಳ ಭಯದಲ್ಲೇ ಬೆತ್ತವನ್ನು ಸಂಗ್ರಹಿಸಿ ಸೇತುವೆಯ ದುರಸ್ತಿ ಕಾರ್ಯ ಮಾಡಿಕೊಳ್ಳಬೇಕಾಗಿದೆ.
ಮಳೆಗಾಲದಲ್ಲೇ ಭಯ: ಬೇಸಿಗೆಯಲ್ಲಿ ಹೇಗಾದರೂ ತಿರುಗಾಡಬಹುದು ಆದರೆ ಮಳೆಗಾಲದಲ್ಲಿ ಒಂದು ಅಡಿ ನೀರು ಜಾಸ್ತಿಯಾದರು ಸಹ ಸೇತುವೆಯ ಮೇಲೆ ತಿರುಗಾಡುವುದು ಅಪಾಯಕಾರಿಯಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಗ್ರಾಮದ ಪ್ರತಿಯೊಬ್ಬರು ತಿರುಗಾಡಲು ಇದೇ ಸೇತುವೆಯನ್ನು ಆಶ್ರಯಿಸಿದ್ದಾರೆ.
ಸೇತುವೆ ನಿರ್ಮಾಣಕ್ಕೆ ಆಗ್ರಹ: ಗ್ರಾಮಕ್ಕೆ ಸೇತುವೆ ಅತ್ಯವಶ್ಯವಾಗಿದ್ದು ಇಲ್ಲೊಂದು ಸೇತುವೆ ನಿರ್ಮಾಣವಾದರೆ ಗ್ರಾಮಸ್ಥರು ಬಿಸಿಲೆ ಹಾಗೂ ಸುಬ್ರಹ್ಮಣ್ಯ ಕಡೆಗೆ ಹೋಗಲು ಸುಮಾರು 30 ಕಿ.ಮೀ.ಗೂ ಹೆಚ್ಚು ದೂರ ಕಡಿಮೆಯಾಗುತ್ತದೆ. ಗ್ರಾಮದ ಮಕ್ಕಳು ಶಾಲೆಗಾಗಿ ಸುಮಾರು 3 ಕಿ.ಮೀ ದೂರದ ಹೊಂಗಡಹಳ್ಳ ಗ್ರಾಮದಲ್ಲಿರುವ ಶಾಲೆಗೆ ವಿದ್ಯಾಭ್ಯಾಸಕ್ಕೆ ತೆರಳಬೇಕಾಗಿದ್ದು ಸಣ್ಣಪುಟ್ಟ ಅಗತ್ಯಗಳಿಗೂ ಸಹ ಹೊಂಗಡಹಳ್ಳ ಗ್ರಾಮಕ್ಕೇ ಹೋಗಬೇಕಾಗಿದೆ.
ಮಳೆಗಾಲಕ್ಕೆ ಮೊದಲೇ ಆಹಾರ ವಸ್ತುಗಳನ್ನು ಶೇಖರಣೆ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದ್ದು ಗ್ರಾಮದಲ್ಲಿ ಕೃಷಿ ಮಾಡುವುದು ಸಹ ಕಷ್ಟಕರವಾಗಿದೆ. ಅತ್ಯಧಿಕವಾಗಿ ಸುರಿಯುವ ಮಳೆಯಿಂದ ಕಾಫಿ ಹೆಚ್ಚಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಮೆಣಸನ್ನು ಬೆಳೆಯಲು ಇಲ್ಲಿ ಅಸಾಧ್ಯವಾಗಿದೆ. ಪ್ರಮುಖ ಬೆಳೆಯಾದ ಏಲಕ್ಕಿ ಬೆಳೆ ಕಂದು ರೋಗದಿಂದ ನಾಶವಾಗಿದೆ. ಆದರೂ ಸಹ ಗ್ರಾಮಸ್ಥರು ಕಾಫಿ, ಏಲಕ್ಕಿ ಜೊತೆಗೆ ಭತ್ತ, ಬೀನ್ಸ್, ಹಸಿರು ಮೆಣಸಿನ ಕಾಯಿ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ: ಕಾಡು ಪ್ರಾಣಿಗಳ ಹಾವಳಿ ಸಹ ವಿಪರೀತವಾಗಿದ್ದು , ಕಾಡು ಪ್ರಾಣಿಗಳು ಒಂದೆಡೆ ಬೆಳೆದ ಬೆಳೆಯನ್ನು ನಾಶ ಮಾಡುತ್ತವೆ. ಜೊತೆಗೆ ತಮ್ಮ ಜೀವಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಗ್ರಾಮಸ್ಥರು ಸಿಲುಕಿದ್ದಾರೆ. ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಇರುವುದರಿಂದ ಅಭಿವೃದ್ಧಿ ಎಂಬುದು ಮರಿಚೀಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಈ ಭಾಗಕ್ಕೆ ಬರಲಿ ಎಂಬ ಕೂಗು ಹೊಂಗಡಹಳ್ಳ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.
ಮುಖ್ಯಮಂತ್ರಿಗಳು ಬರದಿದ್ದಲ್ಲಿ ಉತ್ತಮ ಜಿಲ್ಲಾಧಿಕಾರಿಯೆಂದು ಹೆಸರು ಪಡೆದಿರುವ ಅಕ್ರಂ ಪಾಷಾ ಅವರು ಅರಸೀಕೆರೆ ತಾಲೂಕಿನ ಜೆಸಿಪುರದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು, ಇದೇ ರೀತಿಯಲ್ಲಿ ಹೊಂಗಡಹಳ್ಳ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬಹುದೆಂಬ ನಿರೀಕ್ಷೆಯನ್ನು ಈ ಭಾಗದ ಜನ ಹೊಂದಿದ್ದಾರೆ.
ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿ: ಹೊಂಗಡಹಳ್ಳ ತಾಲೂಕಿನ ಕೊನೆಯ ಗ್ರಾಮ ಪಂಚಾಯಿತಿ. ಇಲ್ಲಿನ ಮೂಕನ ಮನೆ ಫಾಲ್ಸ್, ಕಾಗಿನೆರೆ ಪ್ರಕೃತಿ ಸೌಂದರ್ಯ ತಾಣ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳು ಇರುವ ಸ್ಥಳ. ಸರ್ಕಾರ ಈ ಭಾಗವನ್ನು ಪ್ರವಾಸಿ ತಾಣವಾಗಿಯೂ ಕೂಡ ಅಭಿವೃದ್ಧಿ ಮಾಡಬಹುದು.ಆದಷ್ಟು ಬೇಗ ಇಲ್ಲಿ ಸೇತುವೆೆ ನಿರ್ಮಾಣ ಆಗಲಿ.ಈ ಭಾಗದ ಜನರ ದಶಕಗಳ ಕನಸು ನೆನಸಾಗಲಿ.
● ಸುಧೀರ್ ಎಸ್.ಎಲ್.