ಮಂಡ್ಯ: ಬೆಳಗಾವಿ ಗಲಾಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹತ್ಯೆಗೆ ಸಂಚು ರೂಪಿಸಿರುವ ಹಿಂದೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಮಂಡ್ಯದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಟಿ. ರವಿ ಹತ್ಯೆಗೆ ಸಂಚು ನಡೆ ದಿತ್ತು. ಬೆಳಗಾವಿ ಗಲಾಟೆ ಮಾಡಿಸಿದ್ದೇ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ಬಗ್ಗೆ ಹೇಳಿಕೆ ಮಾಡಿದ್ದು, ನಾನು ಪೊಲೀಸ್ ಠಾಣೆಗೆ ಹೋಗಿದ್ದು, ಕೂತಿದ್ದು ನಿಜ. ಆದರೆ ನಾನು ಅಲ್ಲಿಗೆ ದೂರು ಕೊಡಲು ಹೋಗಿದ್ದೆ. ವಿಧಾನಸೌಧದಲ್ಲಿ 40 ಜನ ಸಿ.ಟಿ. ರವಿ ಅವರನ್ನು ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ್ದರ ವಿರುದ್ಧ ಝೀರೋ ಕಂಪ್ಲೇಂಟ್ ಕೊಡಬೇಕು ಎಂದಿದ್ದರು. ಅದಕ್ಕೆ ಕೊಡುವುದಕ್ಕೆ ಹೋಗಿದ್ದೆ ಎಂದರು. ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದರೆ ತನಿಖೆ ಆಗಲಿ, ತನಿಖೆಗೂ ಮೊದಲು ರವಿ ಹತ್ಯೆ ಸಂಚಿನ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಸರಕಾರಗಳಿಂದ ಕನ್ನಡ ಉದ್ಧಾರ ಸಾಧ್ಯವೇ ಇಲ್ಲ: ಆರ್. ಅಶೋಕ್
ಮಂಡ್ಯ: ಸರಕಾರಗಳಿಂದ ಕನ್ನಡ ಉದ್ಧಾರ ಸಾಧ್ಯವಿಲ್ಲ. ಹೋರಾಟದಿಂದ ಮಾತ್ರ ಸರಕಾರವನ್ನು ಬಗ್ಗಿಸಲು ಸಾಧ್ಯ ಎಂದು ವಿಧಾನ ಸಭೆಯ ವಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನಡೆದ ವಿವಿಧ ಕ್ಷೇತ್ರಗಳ ಸಾಧಕರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಉಳಿಸುವ ಕೆಲಸ ಸರಕಾರದಿಂದ ಆಗುವುದಿಲ್ಲ. ಜನರು ಧ್ವನಿ ಎತ್ತಬೇಕು. ಕನ್ನಡ ಇಲ್ಲದಿದ್ದರೆ ನಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುವ ಸ್ಥಿತಿ ಬರಬಾರದು. ವಾಟಾಳ್ ನಾಗರಾಜ್ ಅವರಂಥ ಹೋರಾಟಗಾರರು ಬೇಕು. ಆದ್ದರಿಂದ ಸಮ್ಮೇಳನವನ್ನು ಸ್ಫೂರ್ತಿ, ಉತ್ಸಾಹದಿಂದಲೇ ಆಚರಿಸಬೇಕು. ಕನ್ನಡತನ ಉಳಿಯಬೇಕಾದರೆ ಆಂಗ್ಲ ಭಾಷೆಯ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅದನ್ನು ಹೆಚ್ಚಿಸಲು ಹೋದರೆ ನಮ್ಮತನ ಇಲ್ಲವಾಗುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಕಲಿಸಬೇಕು ಎಂದರು.