Advertisement

ರೈತನ ಮನೆಗೆ ಸರ್ಕಾರ​​​​​​​

06:00 AM Nov 30, 2018 | |

ಬೆಂಗಳೂರು: ಈ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡಿದ್ದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಈಗ ರೈತರ ಸಮಸ್ಯೆ ಬಗೆಹರಿಸಲು ಪ್ರತಿ ತಿಂಗಳಿಗೊಮ್ಮೆ ಸಂಪುಟ ಸಚಿವರ ಜತೆಗೂಡಿ ಗ್ರಾಮ ಭೇಟಿಗೆ ನಿರ್ಧರಿಸಿದ್ದಾರೆ.

Advertisement

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರೈತರ ಮೊದಲ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. “ರೈತನ ಮನೆಯಲ್ಲಿ ರಾಜ್ಯ ಸರ್ಕಾರ’ ಎಂಬ ಘೋಷಣೆಯಡಿ ಗ್ರಾಮ ಭೇಟಿಗೆ ತೀರ್ಮಾನಿಸಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, “”ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶೂನ್ಯ ಬಂಡವಾಳ ಕೃಷಿ ಹಾಗೂ ನೈಸರ್ಗಿಕ ಕೃಷಿ ಯೋಜನೆಗಳನ್ನು ಯಶಸ್ವಿಗೊಳಿಸಲು ರೈತರಿಗೆ ತಿಳವಳಿಕೆ ನೀಡುವುದು ಹಾಗೂ ರೈತರ ಹೊಲದಲ್ಲಿಯೇ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ” ಎಂದು ಹೇಳಿದರು.

“”ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ತಿಂಗಳು ಒಂದು ಗ್ರಾಮಕ್ಕೆ ಭೇಟಿ ನೀಡಲಾಗುವುದು. ಈ ಸಂದರ್ಭದಲ್ಲಿ ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಸಹಕಾರ ಸಚಿವರು ಹಾಜರಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ರೈತರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುವುದು. ರೈತರು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಯನ್ನು ಬದಲಾಯಿಸಿ, ಹೆಚ್ಚು ಲಾಭದಾಯಕವಾಗಿ ಮಾಡಲು ಹೊಸ ಕೃಷಿ ನೀತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

ಸಭೆಯಲ್ಲಿ 60 ಜನ ಪ್ರಗತಿಪರ ರೈತರು ಸರ್ಕಾರಕ್ಕೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೃಷಿ ವಿಶ್ವ ವಿದ್ಯಾಲಯಗಳ ಕುಲಪತಿಗಳು ಹಾಗೂ ಕೃಷಿ ವಿಜ್ಞಾನಿಗಳೂ ಹಾಜರಿದ್ದು,  ಎಲ್ಲರ ಸಲಹೆ ಟಿಪ್ಪಣಿ ಮಾಡಿಕೊಂಡರು.

Advertisement

“”ರಾಜ್ಯ ಸರ್ಕಾರ ರೈತರಿಗೆ ತಾತ್ಕಾಲಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲು ಶಾಶ್ವತ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು. ರೈತರಿಗೆ ಪ್ರಮುಖವಾಗಿ ಕೃಷಿಯ ಜೊತೆಗೆ ಉಪ ಕಸುಬು ಮಾಡಲು ಸರ್ಕಾರದಿಂದ ಸಹಾಯಧನ ನೀಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಉತ್ತಮ ಬಿತ್ತನೆ ಬೀಜ, ಮಾರುಕಟ್ಟೆ ವ್ಯವಸ್ಥೆ, ಬೆಳೆ ದಾಸ್ತಾನು ಮಾಡಲು ಗೋದಾಮು ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದಾರೆ. ರೈತರಿಗೆ ನೀರು ಮತ್ತು ವಿದ್ಯುತ್‌ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಸರ್ಕಾರ ಹೆಚ್ಚಿನ ಗಮನ ಹರಿಸಲಿದೆ” ಎಂದು ಕುಮಾರಸ್ವಾಮಿ ಹೇಳಿದರು.

“”ಪ್ರಮುಖವಾಗಿ ಹೊರ ದೇಶಗಳಿಗೆ ರಪು¤ ಮಾಡುವ ಗುಣಮಟ್ಟದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಸಲಹೆ ಕೇಳಿಬಂದಿದೆ. ಸರ್ಕಾರ ರೈತ ಪ್ರತಿನಿಧಿಗಳ ಸಮಸ್ಯೆಗಳು ಹಾಗೂ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿದ್ದು, ಪ್ರತಿ ತಿಂಗಳು ಸಲಹಾ ಸಮಿತಿ ಸಭೆ ನಡೆಸಿ, ಪ್ರತಿಯೊಂದು ಸಭೆಯ ಪ್ರಗತಿ ಕುರಿತು ಚರ್ಚೆ ಮಾಡಲಾಗುವುದು. ರೈತರ ಹೊಲಗಳಲ್ಲಿಯೇ ಸಭೆ ಮಾಡುವ ಮೂಲಕ ರೈತರಲ್ಲಿ ವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.ಕೃಷಿ ಸಚಿವ ಶಿವಶಂಕರ ರೆಡ್ಡಿ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಂಶಪೂರ್‌, ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿ ಪರ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next