Advertisement

ಬೆಳೆಸಾಲ ಮಾತ್ರ ಈ ಬಾರಿ ಮನ್ನಾ

06:00 AM Jun 26, 2018 | |

ಬೆಂಗಳೂರು: ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳುತ್ತಿದ್ದರೂ ಪ್ರಸಕ್ತ ಬಜೆಟ್‌ನಲ್ಲಿ ಸಹಕಾರ ಬ್ಯಾಂಕ್‌ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆಸಾಲ ಮಾತ್ರ ಮನ್ನಾ ಆಗಲಿದೆ.

Advertisement

ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು 60 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತ ಅವಶ್ಯಕತೆ ಇದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಅಸಾಧ್ಯ. ಹೀಗಾಗಿ ಮೊದಲ ಹಂತದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಮತ್ತು ನಂತರದಲ್ಲಿ ಹಂತ ಹಂತವಾಗಿ ಇತರೆ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ.

ರೈತರ ಸಾಲ ಮನ್ನಾ ಕುರಿತಂತೆ ಸಹಕಾರ ಬ್ಯಾಂಕ್‌ಗಳ ಅಭಿಪ್ರಾಯ ಪಡೆಯಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷರು ಮತ್ತು ನಿರ್ದೇಶಕರ ಸಭೆ ಕರೆದಿದ್ದು, ಈ ಸಭೆ ಬಳಿಕ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಮೊದಲ ಹಂತದಲ್ಲಿ ರೈತರ ಬೆಳೆಸಾಲ ಮಾತ್ರ ಮನ್ನಾ ಮಾಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸೂಚನೆ ಮೇರೆಗೆ ಹಿಂದಿನ ಸರ್ಕಾರ ರೈತರ 50 ಸಾವಿರ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಿತ್ತು. ಇದಕ್ಕೆ ಇನ್ನೂ 7 ಸಾವಿರ ಕೋಟಿ ರೂ. ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಮಾರ್ಚ್‌ ಅಂತ್ಯದವರೆಗೆ ರೈತರು ಮಾಡಿದ ಎಲ್ಲಾ 10 ಸಾವಿರ ಕೋಟಿ ರೂ. ಮನ್ನಾ ಮಾಡಬೇಕು ಎಂದು ಸಹಕಾರ ಬ್ಯಾಂಕ್‌ಗಳು ಹೇಳಿವೆ. ಆದರೆ, ಸಾಲ ಮನ್ನಾ ಒಂದೇ ಪರಿಹಾರ ಅಲ್ಲ ಎಂಬುದೂ ನನಗೆ ಗೊತ್ತಿದೆ. ಇನ್ನೊಂದೆಡೆ ಸಾಲ ಮನ್ನಾಕ್ಕೆ ಸರ್ಕಾರ ಹಣ ಎಲ್ಲಿಂದ ತರುತ್ತದೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ರೈತರ ಸಾಲ ಮನ್ನಾ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಸಾಲ ಮನ್ನಾ ಯೋಜನೆ ಜಾರಿಗೆ ಹಲವಾರು ರೀತಿಯ ಮಾಹಿತಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಸಹಕಾರ ಬ್ಯಾಂಕ್‌ಗಳು ಕೊಟ್ಟ ಮಾಹಿತಿಯನ್ನೂ ನಾನು ನೋಡಿದ್ದೇನೆ. ಯಾವುದೇ ಸಹಕಾರ ಬ್ಯಾಂಕ್‌ಗಳು ಸಾಲ ಮನ್ನಾಕ್ಕೆ ವಿರೋಧವಿಲ್ಲ. ಯಾವತ್ತು ಸಾಲ ಮನ್ನಾ ಘೋಷಣೆಯಾಗುತ್ತದೋ ಅದುವರೆಗಿನ ಸಾಲ ಮನ್ನಾ ಮಾಡಬೇಕು ಎಂದು ಹೇಳುತ್ತಿವೆ. ಸಹಕಾರ ಬ್ಯಾಂಕ್‌ಗಳವರು ಹೇಳಿದೆಲ್ಲವನ್ನೂ ಕೇಳಿಕೊಂಡಿದ್ದೇನೆ. ಸಾಲ ಮನ್ನಾ ಮಾಡುವಾಗ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದರು.

Advertisement

ಸೋಮವಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಂಪೂರ್ಣ ಸಾಲ ಮನ್ನಾ ಮಾಡಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ. ಹಿಂದಿನ ಸರ್ಕಾರದಲ್ಲಿ ರೈತರ 50 ಸಾವಿರ ರೂ.ವರೆಗಿನ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ 5000 ಕೋಟ್‌ ರೂ. ಬಿಡುಗಡೆ ಮಾಡಲಾಗಿದೆ. ಇದು ಸೇರಿದಂತೆ ಸಹಕಾರ ಬ್ಯಾಂಕ್‌ಗಳ ಒಟ್ಟು 11 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಬೇಕಿದ್ದು, ಹಿಂದೆ ಮಾಡಿದ ಸಾಲ ಮನ್ನಾದ ಬಾಕಿ 3000 ಕೋಟಿ ರೂ. ಹಾಗೂ ಮತ್ತೆ ಮನ್ನಾ ಮಾಡಬೇಕಾದ ಸಾಲ 3000 ಕೋಟಿ ರೂ. ಬಗ್ಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಲಿದ್ದಾರೆ ಎಂದು ಹೇಳಿದರು.

ಸಹಕಾರ ಬ್ಯಾಂಕ್‌ಗಳ ಮನ್ನಾ ಬಾಕಿ 3 ಸಾವಿರ ಕೋಟಿ ಮಾತ್ರ
ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಬೆಳೆ ಸಾಲ ಮನ್ನಾ ಮಾಡಲು ಇನ್ನು ಮೂರು ಸಾವಿರ ಕೋಟಿ ರೂ. ಮಾತ್ರ ನೀಡಬೇಕಾಗುತ್ತದೆ. 2017ರ ಡಿಸೆಂಬರ್‌ ಅಂತ್ಯದವರೆಗಿನ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ ಸಹಕಾರ ಬ್ಯಾಂಕ್‌ಗಳಲ್ಲಿ ಡಿಸೆಂಬರ್‌ ಅಂತ್ಯಕ್ಕೆ 11 ಸಾವಿರ ಕೋಟಿ ರೂ. ಸಾಲ ಬಾಕಿ ಇದೆ. ಅದರಲ್ಲಿ 8165 ಕೋಟಿ ರೂ. ಸಾಲವನ್ನು ಸಿದ್ದರಾಮಯ್ಯ ಸರ್ಕಾರ ಮನ್ನಾ ಮಾಡಿತ್ತು. ಉಳಿದ ಸುಮಾರು ಮೂರು ಸಾವಿರ ಕೋಟಿ ರೂ. ಸಾಲವನ್ನು ಹೊಸ ಸರ್ಕಾರ ಮನ್ನಾ ಮಾಡಬೇಕಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆಸಾಲದ ಮೊತ್ತ ಇನ್ನೂ ಪೂರ್ಣ ಪ್ರಮಾಣದಲ್ಲಿ ಗೊತ್ತಾಗಿಲ್ಲ.

ಇದರಿಂದ ನನಗೇನೂ ಕಮಿಷನ್‌ ಬರಲ್ಲ
ರೈತರ ಸಾಲ ಮನ್ನಾ ವಿಚಾರದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಅಧಿಕಾರದಲ್ಲಿರುವಷ್ಟು ದಿನ ರೈತರು, ಜನ ಸಾಮಾನ್ಯರಿಗೆ ಏನು ಮಾಡಿದ್ದೇನೆ ಎಂಬುದಷ್ಟೇ ನನಗೆ ಮುಖ್ಯ. ಈ ವಿಚಾರದಲ್ಲಿ ಯಾರ ಮುಲಾಜಿನಲ್ಲೂ ನಾನಿಲ್ಲ ಎಂದು ಹೇಳಿದ್ದಾರೆ.

ರೈತರ ಸಾಲ ಮನ್ನಾ ಕುರಿತಂತೆ ಸಹಕಾರ ಬ್ಯಾಂಕ್‌ಗಳ ಅಭಿಪ್ರಾಯ ಪಡೆಯಲು ಸೋಮವಾರ ವಿಧಾನಸೌಧದಲ್ಲಿ ನಡೆಸಿದ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷರು ಮತ್ತು ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮತ್ತು ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದು ನನಗೆ ಗೊತ್ತಿದೆ. ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಮ್ಮ ಆರ್ಥಿಕ ಇಲಾಖೆ ಅಧಿಕಾರಿಗಳು ನಾನು ಮೃದುವಾಗಿದ್ದೇನೆ ಎಂದು ತಿಳಿದುಕೊಂಡಿದ್ದಾರೆ. ಬೇರೆಯವರಂತೆ ಗಡಸು ದನಿಯಲ್ಲಿ ಮಾತನಾಡಿ ದರ್ಪದಿಂದ ಹೇಳಲು ನನ್ನಿಂದ ಸಾಧ್ಯವಿಲ್ಲ. ಮೃದುವಾಗಿಯೇ ಹೇಗೆ ಕೆಲಸಮಾಡಬೇಕು ಎಂಬುದು ಗೊತ್ತಿದೆ ಎಂದರು.

ಸಾಲ ಮನ್ನಾ ಬಗ್ಗೆ ಅಧಿಕಾರಿಗಳೇ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗಿದೆ. ಈ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಹೀಗಾಗಿ ಬಡ್ಡಿ ಕಡಿಮೆ ಮಾಡಬೇಡಿ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳವರ ಜತೆ ಮಾತನಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರ ಇರುತ್ತದೆ ಎಂದು ಕೆಲವು ಅಧಿಕಾರಿಗಳು ಮಾತನಾಡಿದ್ದಾರೆ. ಆದರೆ, ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದಕ್ಕಿಂತ ಇದ್ದಷ್ಟು ದಿನ ಏನು ಮಾಡಿದ್ದೇನೆ ಎಂಬುದು ನನಗೆ ಮುಖ್ಯ. ಈ ವಿಚಾರದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದರು.

ರೈತರ ಸಾಲ ಮನ್ನಾ ಮಾಡಿದರೆ ನನಗೇನೂ ಕಮಿಷನ್‌ ಬರುವುದಿಲ್ಲ. ಕಮಿಷನ್‌ ಪಡೆಯುವವರು ಯಾರು ಎಂಬುದೂ ನನಗೆ ಗೊತ್ತಿದೆ. ರೈತರ ಸಾಲ ಮನ್ನಾ ಮಾಡಿದ ಬಳಿಕ ಸಹಕಾರ ಬ್ಯಾಂಕ್‌ಗಳ ಕಾರ್ಯದರ್ಶಿಗಳು ರೈತರಿಂದ ಹೆಬ್ಬೆಟ್ಟು ಹಾಕಿಕೊಂಡು ಅವರ ಸಾಲ ಮುಂದುವರಿಸಿ ರೈತರಿಂದ ಬಡ್ಡಿ ವಸೂಲಿ ಮಾಡುತ್ತಿರುವುದೂ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದು. ಸಾಲ ಮನ್ನಾದ ಸಂಪೂರ್ಣ ಲಾಭ ರೈತರಿಗೇ ಸಿಗಬೇಕು, ಮಧ್ಯವರ್ತಿಗಳ ಪಾಲಾಗಬಾರದು ಎಂಬ ದೃಷ್ಟಿಯಿಂದ ಸಾಲ ಮನ್ನಾ ಘೋಷಣೆ ಮಾಡುತ್ತೇನೆ ಎಂದರು.

ಮಾಜಿ ಸಿಎಂಗೆ ಸಿಎಂ ಟಾಂಗ್‌
“ಈಗಲೇ ಬಜೆಟ್‌ ಮಂಡಿಸುವುದು ಬೇಡ. ಲೋಕಸಭೆ ಚುನಾವಣೆ ನಂತರ ಬಜೆಟ್‌ ಮಂಡಿಸಲಿ ಎನ್ನುವ ಮೂಲಕ ಕೆಲವರು ಲೋಕಸಭೆ ಚುನಾವಣೆವರೆಗೆ ಸರ್ಕಾರ ಇರುತ್ತದೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಾನು ಬಜೆಟ್‌ ಮಂಡಿಸುತ್ತೇನೋ ಇಲ್ಲವೋ  ಗೊತ್ತಿಲ್ಲ’ ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಯವರ ಮಾತು. ಹೊಸ ಬಜೆಟ್‌ ಮಂಡನೆಗೆ ಆಕ್ಷೇಪ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಿಡಿ ಕಾರಿರುವ ಅವರು, ಲೋಕಸಭೆ ಚುನಾವಣೆ ನಂತರ ಬಜೆಟ್‌ ಮಂಡನೆ ಮಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ನಾನು ಬಜೆಟ್‌ ಮಂಡನೆ ಮಾಡುತ್ತೇನೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು. ಜತೆಗೆ,  ಕಳೆದ ಚುನಾವಣೆಯಲ್ಲಿ ಸೋತ 100 ಮಂದಿ ಅಂಗೀಕರಿಸಿದ ಬಜೆಟ್‌ ಮುಂದುವರಿಸಬೇಕೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ರೈತರ ಸಾಲ ಮನ್ನಾ ಕುರಿತಂತೆ ಸಹಕಾರ ಬ್ಯಾಂಕ್‌ಗಳ ಅಭಿಪ್ರಾಯ ಪಡೆಯಲು ಸೋಮವಾರ ವಿಧಾನಸೌಧದಲ್ಲಿ ನಡೆಸಿದ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷರು ಮತ್ತು ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಬಜೆಟ್‌ ಮಂಡನೆ ವೇಳೆ ಇದ್ದವರ ಪೈಕಿ 100 ಶಾಸಕರು ಈ ಬಾರಿ ಸೋತಿ¨ªಾರೆ. ಅವರು ಒಪ್ಪಿಗೆ ನೀಡಿದ ಬಜೆಟ್‌ ನಾನು ಮುಂದುವರಿಸಬೇಕೇ? ಕಳೆದ ಸರ್ಕಾರದ ಬಜೆಟ… ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ  100 ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ತಂದರೆ ಏನು ಮಾಡುವುದು ಎಂದು ಪ್ರಶ್ನಿಸಿದರಲ್ಲದೆ, ಅದಕ್ಕಾಗಿಯೇ ಹೊಸ ಬಜೆಟ್‌ ಮಂಡನೆಗೆ ಮುಂದಾಗಿರುವುದು ಎಂದು ತಿಳಿಸಿದರು.

ಈ ಮಧ್ಯೆ ಬಜೆಟ್‌ ಮಂಡನೆ ಕುರಿತಂತೆ ಗೊಂದಲಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳಬೇಕು. ಈಗಾಗಲೇ ಅವರು ಇಲಾಖಾವಾರು ಸಭೆಗಳನ್ನು ನಡೆಸಿ ಬಜೆಟ್‌ಗೆ ಬೇಕಾದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಏನಾದರೂ ಹೇಳುವುದು ಸರಿಯಲ್ಲ ಎಂಬುದು ನನ್ನ 30 ವರ್ಷದ ರಾಜಕೀಯ ಅನುಭವ ಹೇಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next