Advertisement

ಡೈರಿಯಲ್ಲಿ ಹೆಸರುಗಳ ಉಲ್ಲೇಖ ಸಿಎಂ ರಾಜೀನಾಮೆ ನೀಡಲಿ: ಶೋಭಾ

11:47 AM Feb 25, 2017 | Harsha Rao |

ಮಂಗಳೂರು: ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಮನೆಯಲ್ಲಿ ದೊರೆತಿರುವ ಡೈರಿಯಲ್ಲಿ ರಾಜ್ಯ ಸಚಿವ ಸಂಪುಟದ ಹಲವರ ಹೆಸರು ನಮೂದು ಆಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಸಂಬಂಧಪಟ್ಟ ಇತರ ಸಚಿವರಿಂದಲೂ ರಾಜೀನಾಮೆ ಪಡೆಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದರು.

Advertisement

ದ. ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರ ಮುಖವಾಡ ಬಯಲಾಗಿದೆ. ಸರಕಾರ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ರಾಜ್ಯದಲ್ಲಿ ಎಲ್ಲ ಕಾಂಗ್ರೆಸ್‌ ಶಾಸಕರ ಕಚೇರಿ ಹಾಗೂ ನಿವಾಸಗಳ ಮುಂದೆ ಬಿಜೆಪಿಯಿಂದ ಪ್ರತಿಭಟನೆ ಹಾಗೂ ಧರಣಿ ಆರಂಭವಾಗಿದೆ. ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ನಡೆಯಲಿದೆ ಎಂದರು.

ಎತ್ತಿನಹೊಳೆ ಕೊಳವೆ: ಅವ್ಯವಹಾರ
ಎತ್ತಿನಹೊಳೆ ಯೋಜನೆಯಲ್ಲಿ ಅಲ್ಲಿ ನೀರು ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸರಕಾರ ವಿಫಲವಾಗಿದ್ದರೂ ಸಾವಿರಾರು ಕೋ.ರೂ. ಮೊತ್ತದ ಕೊಳವೆಗಳನ್ನು ಖರೀದಿಸಲಾಗಿದ್ದು ವ್ಯಾಪಕ ಅವ್ಯವಹಾರ ಆಗಿದೆ ಎಂದರು. 

ಪೊಲೀಸರು ಕ್ರಮ ಕೈಗೊಳ್ಳಬೇಕು
ಪಿಣರಾಯಿ ಕಾರ್ಯಕ್ರಮದ ಸಂದರ್ಭ ಕೇರಳದಿಂದ ದೊಡ್ಡ ಸಂಖ್ಯೆಯಲ್ಲಿ ಕಮ್ಯೂನಿಸ್ಟ್‌ ಪಕ್ಷದ ತಂಡಗಳು ಮಂಗಳೂರಿ ಆಗಮಿಸಿ ಸಂಘರ್ಷವನ್ನು ಹುಟ್ಟುಹಾಕಲು ಸಿದ್ದತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಆದುದರಿಂದ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಡೈರಿ ಮಾಹಿತಿ ಸಿಕ್ಕಿದ್ದು ಕಾಂಗ್ರೆಸ್‌ ಮೂಲಗಳಿಂದ ಐಟಿ ದಾಳಿ ವೇಳೆ ಸಿಕ್ಕಿದ ಡೈರಿಯು ಬಿಜೆಪಿಗೆ ಹೇಗೆ ಲಭಿಸಿತು ಎಂಬದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೋಭಾ, ಡೈರಿಯಲ್ಲಿನ ಮಾಹಿತಿಗಳು ಸಿಕ್ಕಿದ್ದು ಕಾಂಗ್ರೆಸ್‌ ಕಚೇರಿ ಹಾಗೂ ಮುಖ್ಯಮಂತ್ರಿ ಕಚೇರಿ ಮೂಲಗಳಿಂದ. ಈ ಬಗ್ಗೆ ಅವರೇ ತನಿಖೆ ಮಾಡಲಿ ಎಂದರು. ಅಲ್ಲಿರುವ ಇನ್ಶಿಯಲ್‌ಗ‌ಳು ಸಚಿವರುಗಳಿಗೂ ಸಂಬಂಧವಿಲ್ಲ ಎಂದು ಗೋವಿಂದರಾಜು ಅವರ ಹೇಳಿಕೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಶೋಭಾ ಅವರು, ಹಾಗಾದರೆ ಅಲ್ಲಿರುವ ಇನ್ಶಿಯಲ್‌ಗ‌ಳು ಯಾರಿಗೆ ಸಂಬಂಧಪಟ್ಟದ್ದು ಎಂದು ಅವರೇ ಬಹಿರಂಗ ಪಡಿಸಲಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next