ಬೆಂಗಳೂರು: ಕರ್ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆ ಭೇಟಿಯು ಯಶಸ್ವಿಯಾಗಿದ್ದು, ಪ್ರಥಮ ಬಾರಿಗೆ ಎರಡು ಪ್ರಮುಖ ಕಂಪೆನಿಗಳ ಜತೆ ಒಟ್ಟು 52 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.
ನವೀಕರಿಸಬಹುದಾದ ಇಂಧನ ವಲಯದಲ್ಲಿ ರೆನ್ಯೂ ಪವರ್ ಕಂಪೆನಿಯು 50,000 ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರಕಾರದದ ಜತೆ ಒಪ್ಪಂದ ಮಾಡಿಕೊಂಡಿದ್ದು, ರಾಜ್ಯದ ಇಂಧನ ಕ್ಷೇತ್ರದ ಪ್ರಗತಿಯಲ್ಲಿ ಈ ಒಪ್ಪಂದ ಪ್ರಮುಖ ಮೈಲುಗಲ್ಲಾಗಲಿದೆ. ಅಲ್ಲದೆ, ಮೆ. ಲುಲು ಗ್ರೂಪ್ ಇಂಟರ್ ನ್ಯಾಷನಲ್ ಸಂಸ್ಥೆಯು ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಮುಖ್ಯಮಂತ್ರಿ ನೇತೃತ್ವದ ನಿಯೋಗದ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ನೀಡುವ ಆರ್ ಆ್ಯಂಡ್ ಡಿ ನೀತಿ, ಹೆಚ್ಚು ಉದ್ಯೋಗ ಒದಗಿಸುವ ಉದ್ಯಮಗಳಿಗೆ ಹೆಚ್ಚಿನ ತ್ತೇಜನ ನೀಡುವ ನೀತಿ ಜಾರಿಗೆ ತರಲಾಗಿದೆ ಎಂದು ಸಿಎಂ ಹೇಳಿದ್ದಾರೆ.
40 ಸಾವಿರ ಉದ್ಯೋಗ ಸೃಷ್ಟಿ
ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು 50,000 ಕೋಟಿ ರೂ. ಹೂಡಿಕೆ ಒಪ್ಪಂದದಡಿ ಮುಂದಿನ 7 ವರ್ಷಗಳಲ್ಲಿ 11,900 ಕೋಟಿ ರೂ. ಬಂಡವಾಳ ಹೂಡÛಲಿದೆ. 2ನೇ ಹಂತದಲ್ಲಿ 37,500 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಯೋಜನೆಗಳಿಂದ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಲುಲು ಗ್ರೂಪ್ ಎರಡು ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿದ್ದು, ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
Related Articles
ಸಿಎಂ ದಾವೋಸ್ ಪ್ರವಾಸ 1 ದಿನ ವಿಸ್ತರಣೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ದಿನ ದಾವೋಸ್ ಪ್ರವಾಸ ವಿಸ್ತರಣೆ ಮಾಡಿದ್ದಾರೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ ಗುರುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ವಾಪಸಾಗಬೇಕಿದ್ದ ಸಿಎಂ, ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಚಿಸಿರುವ ಉದ್ಯಮಿಗಳ ಜತೆ ಗುರುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸವನ್ನು ಒಂದು ದಿನ ಮುಂದೂಡಿದ್ದು, ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.