Advertisement

ನಾಳೆ ಮೂರು ಕಡೆ ಸಿಎಂ ಸಮಾವೇಶ: ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ 

02:49 PM Jan 06, 2018 | |

ನಗರ: ಅಹಿತಕರ ಘಟನೆಗಳ ನಡುವೆ ರವಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾ ಬಂದ್‌ಗೆ ಕರೆ ನೀಡುವ ತವಕದಲ್ಲಿರುವ ಹಿಂದೂ ಸಂಘಟನೆಗಳು, ಕರಿಪತಾಕೆ ಹಿಡಿಯುತ್ತೇವೆ ಎಂದು ಸವಾಲೆಸೆದ ಜೆಡಿಎಸ್‌, ಇಷ್ಟಲ್ಲದೆ ಭದ್ರತೆ, ಕಾರ್ಯಕ್ರಮ ಜೋಡಣೆಯ ತಯಾರಿ ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ.

Advertisement

ಜಿಲ್ಲೆಯ ಮೂರು ಕಡೆ ಬೃಹತ್‌ ಸಮಾವೇಶ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಅವಧಿಯ ಕೊನೆಯ ಭೇಟಿ ಇದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಕಾರಣ, ಕಾಂಗ್ರೆಸ್‌ಗೆ ಇದು ಶಕ್ತಿ ಪ್ರದರ್ಶನದ ವೇದಿಕೆ. ಸರಕಾರಿ ಕಾರ್ಯಕ್ರಮ ಎಂದು ಬಿಂಬಿಸಿಕೊಳ್ಳುತ್ತಿದ್ದರೂ ಕಾಂಗ್ರೆಸ್‌ ಅಸ್ತಿತ್ವವನ್ನು ಮತ್ತೂಮ್ಮೆ ರಾಜ್ಯದಲ್ಲಿ ಬೇರೂರಿಸುವ ಪ್ರಯತ್ನವೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಶಕ್ತಿ ಪ್ರದರ್ಶನಕ್ಕೆ
ಸಿದ್ಧತೆ ನಡೆಸುತ್ತಿದ್ದಾರೆ.

ಕಲ್ಲಡ್ಕ, ಪಿಲಿಕುಳದ ಘಟನೆಗಳು, ಕಾಟಿಪಳ್ಳ ದೀಪಕ್‌ ರಾವ್‌ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲೆಯ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಇದನ್ನೆಲ್ಲ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದು, ಸಿಎಂ ಕಾರ್ಯಕ್ರಮದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ರವಾನೆಯಾಗಿದೆ. ಇದರ ನಡುವೆ ಗ್ರಾಮಾಂತರ ಠಾಣೆ ಎಸ್‌ಐ ಹಾಗೂ ಸಿಬಂದಿ ಅಮಾನತು ಅಥವಾ ವರ್ಗಾವಣೆಗೆ ಆಗ್ರಹಿಸಿರುವ ಹಿಂದೂ ಸಂಘಟನೆಗಳನ್ನು ತಡೆಯುವುದು ಸವಾಲೇ ಸರಿ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಾಕಷ್ಟು ತಯಾರಿ ನಡೆಸಿಕೊಂಡಿದೆ.

ಮುಖ್ಯಮಂತ್ರಿ ಬರುವ ಹಾದಿಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಬ್ಯಾರಿಕೇಡ್‌ಗಳನ್ನು ಆಯಕಟ್ಟಿನ ಜಾಗದಲ್ಲಿಟ್ಟು ವಾಹನಗಳ ನಿಯಂತ್ರಣಕ್ಕೆ ನಕಾಶೆ ರೂಪಿಸುತ್ತಿದ್ದಾರೆ. ಚಿಕ್ಕಮಗಳೂರಿನಿಂದ 15 ಅಧಿಕಾರಿ, 110 ಪೊಲೀಸ್‌ ಸಿಬಂದಿಯನ್ನು ಕರೆಸಿಕೊಳ್ಳಲಾಗಿದೆ. ಪುತ್ತೂರು ತಾಲೂಕಿನ ವಿವಿಧ ಠಾಣೆಯ 218 ಸಿಬಂದಿ ಜತೆಯಾಗಿದ್ದಾರೆ. ಇದರಲ್ಲಿ ಹೋಂ ಗಾರ್ಡ್‌ಗಳು ಸೇರಿದ್ದಾರೆ. ಎಸ್ಪಿ ನಿರ್ದೇಶನದಂತೆ ಇಬ್ಬರು ಡಿವೈಎಸ್ಪಿ, ಒಬ್ಬರು ಎಎಸ್ಪಿ, 6 ಇನ್‌ಸ್ಪೆಕ್ಟರ್‌, 20 ಉಪನಿರೀಕ್ಷಕರು ಪುತ್ತೂರಿಗೆ ಆಗಮಿಸಲಿದ್ದಾರೆ. 5 ಕೆಎಸ್‌ಆರ್‌ಪಿ ಬೆಟಾಲಿಯನ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 3 ತಂಡ ಜತೆಯಾಗಲಿದೆ.

ಸಿಎಂ ಕಾರ್ಯಕ್ರಮ
ಬೆಳ್ತಂಗಡಿಯ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿಗಳು ಅಪರಾಹ್ನ 1 ಗಂಟೆ ಸುಮಾರಿಗೆ ಪುತ್ತೂರಿಗೆ ಆಗಮಿಸಿ, 4 ಗಂಟೆಗೆ ಮೂಡಬಿದಿರೆಗೆ ತೆರಳಲಿದ್ದಾರೆ. ಅಂದು ಜಿಲ್ಲೆಯಲ್ಲೇ ತಂಗಲಿದ್ದಾರೆ. ಪುತ್ತೂರಿನ ಕಾರ್ಯಕ್ರಮಕ್ಕಾಗಿ ಕಿಲ್ಲೆ ಮೈದಾನದಕ್ಕೆ ಬೃಹತ್‌ ಚಪ್ಪರ ಹಾಕುವ ಕೆಲಸ ನಡೆಯುತ್ತಿದೆ. ಕಾರ್ಯಕ್ರಮದ ವೇದಿಕೆ ಬಳಿಗೆ ಮುಖ್ಯಮಂತ್ರಿ, ಸಚಿವರ ಕಾರಿಗೆ ಮಾತ್ರ ಪ್ರವೇಶ. ರವಿವಾರವಾದ ಕಾರಣ ಟ್ರಾಫಿಕ್‌ ದಟ್ಟಣೆ ಇರುವುದಿಲ್ಲ. ಆದರೂ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಚಿಂತಿಸುತ್ತಿದೆ.

Advertisement

ಸಾಮೂಹಿಕ ಶಿಲಾನ್ಯಾಸ
ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾಧಿಕಾರಿ ಎಸ್‌. ಸಸಿಕಾಂತ್‌ ಸೆಂಥಿಲ್‌ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ. ಪುತ್ತೂರಿನಲ್ಲಿ ಒಟ್ಟು 52.4 ಕೋಟಿ. ರೂ.ಗಳ ಕಾಮಗಾರಿಗಳಿಗೆ ಶಿಲಾನ್ಯಾಸ, 13.50 ಕೋಟಿ ರೂ.ನ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಹೀಗೆ ಒಟ್ಟು 65.9 ಕೋಟಿ ರೂ.ಗಳ ಯೋಜನೆಗಳು ಸಿಎಂಗಾಗಿ ಕಾಯುತ್ತಿವೆ. ಇದರಲ್ಲಿ ನೂತನ ನಿರೀಕ್ಷಣ ಮಂದಿರ (ಐ.ಬಿ.), 4 ಕಡೆ ಸೇತುವೆ, 1 ತಡೆಗೋಡೆ, 8 ರಸ್ತೆ, 3 ಸೇತುವೆ, 1 ಪೊಲೀಸ್‌ ಠಾಣೆ ಕಟ್ಟಡ, ಒಂದು ವಿವಿ ಕಾಲೇಜು ಕಟ್ಟಡ ಉದ್ಘಾಟನೆಗೊಳ್ಳಲಿದೆ. ನಗರಸಭೆಗೆ ಮಂಜೂರಾದ ನಗರೋತ್ಥಾನ ಯೋಜನೆಯ 3ನೇ ಹಂತದ 25 ಕೋಟಿ ರೂ. ಕಾಮಗಾರಿ, ವಿಟ್ಲ ನಗರ ಪಂಚಾಯತ್‌ನ 5 ಕೋಟಿ ರೂ. ಕಾಮಗಾರಿ, ಪಡುಮಲೆ ಅಭಿವೃದ್ಧಿಯ 5 ಕೋಟಿ ರೂ. ಯೋಜನೆಗಳು ಶಿಲಾನ್ಯಾಸಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next