ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವ ಕಿರೀಸಾವೆ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ಬುಧವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರನ್ನು ತಡೆದು ತಪಾಸಣೆ ನಡೆಸಿದರು.
ಕುಮಾರಸ್ವಾಮಿಯವರು ಹಾಸನ ರಸ್ತೆ ಮೂಲಕ ಶಿವಮೊಗ್ಗ ಲೋಕಸಭಾ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆಗೆ ತೆರಳುತ್ತಿದ್ದರು. ಈ ವೇಳೆ, ರಾಷ್ಟ್ರೀಯ ಹೆದ್ದಾರಿ 75ರ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಸಿಎಂ ಕಾರನ್ನು ತಡೆದು, ತಪಾಸಣೆ ಮಾಡಿದರು.
ಕಾರು ಚೆಕ್‌ಪೋಸ್ಟ್ ಬಳಿ ಬರುತ್ತಿದ್ದಮತೆ ಕರ್ತವ್ಯನಿರತ ಅಧಿಕಾರಿ ಕೈ ಅಡ್ಡ ಹಾಕಿದರು. ಈ ವೇಳೆ, ಸಿಎಂ ಅವರು, ಏನ್ ಬ್ರದರ್, ಕಾರು ತಪಾಸಣೆ ಮಾಡಬೇಕಾ/. ಸರಿ ಮಾಡಪ್ಪ. ನಿನ್ನ ಕರ್ತವ್ಯಕ್ಕೆ ನಾನೇಕೆ ಅಡ್ಡಿ ಮಾಡಲಿ ಎಂದರು. ಕಾರಿನ ತಪಾಸಣೆ ಮಾಡಿದ ಅಧಿಕಾರಿಗಳು, ಅದನ್ನು ಚಿತ್ರೀಕರಿಸಿಕೊಂಡರು. ಸಿಎಂ ಹಿಂಬಾಲಕರ ಕಾರುಗಳನ್ನೂ ತಪಾಸಣೆ ಮಾಡಿದರು. ಆದರೆ, ಸಿಎಂ ಅವರ ಬೆಂಗಾವಲು ಕಾರುಗಳ ತಪಾಸಣೆಯನ್ನು ಮಾಡಲಿಲ್ಲ. ಜೆಡಿಎಸ್ ಕಾರ್ಯಕರ್ತರು ಇದನ್ನು ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಕುಮಾರಸ್ವಾಮಿ ಅಭಿಮಾನಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಳಿಕ, ಭದ್ರಾವತಿಯ ಬೈಪಾಸ್ ಬಳಿಯ ಕಾರೆಹಳ್ಳಿ ಚೆಕ್‌ಪೋಸ್ಟ್‌ನಲ್ಲಿಯೂ
ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು,ತಪಾಸಣೆ ನಡೆಸಲಾಯಿತು.
ಡಿಕೆಶಿ ಹೆಲಿಕಾಪ್ಟರ್ ಪರಿಶೀಲನೆ
ಚುನಾವಣಾ ಪ್ರಚಾರ ನಿಮಿತ್ತ ಬುಧವಾರ ಶಿವಮೊಗ್ಗಕ್ಕೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್‌ನ್ನು ಚುನಾವಣಾ ಧಿಕಾರಿಗಳು ಪರಿಶೀಲಿಸಿದರು. ಖಾಸಗಿ ಹೆಲಿಕಾಪ್ಟರ್‌ನಲ್ಲಿ ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಡಿಕೆಶಿ ಆಗಮಿಸಿದ್ದರು. ಈ ವೇಳೆ, ಚುನಾವಣಾ ಧಿಕಾರಿಗಳು ಹೆಲಿಕಾಪ್ಟರ್ ಪರಿಶೀಲನೆ ನಡೆಸಿದರು.