ಅಥಣಿ: ಪ್ರವಾಹ ಪೀಡಿತ ಸಂತ್ರಸ್ತರ ಅಳಲು ಕೇಳಲು ಸೋಮವಾರ ಬರಬೇಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರಾಶ್ರಿತರನ್ನು ನಿರಾಸೆಗೊಳಿಸಿದ್ದಾರೆ.
ತಾಲೂಕಿನ ಸತ್ತಿ ಸಂತ್ರಸ್ತರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹವಾಮಾನ ವೈಪರೀತ್ಯದಿಂದ ಆಗಮಿಸದಿರುವುದಕ್ಕೆ ಇಲ್ಲಿಯ ನಿವಾಸಿಗಳು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಾ ನದಿ ನೀರಿನ ಪ್ರವಾಹದಿಂದ ಸತ್ತಿ ಗ್ರಾಮದ ಕೆಲವು ಮನೆಗಳು ಮುಳುಗಡೆಯಾಗಿವೆ. 12-13 ವರ್ಷವಾದರೂ ಸಮಸ್ಯೆ ಬಗೆಹರಿದಿಲ್ಲ. ಪ್ರತಿ ಸಲ ನೀರು ಬಂದು ಕುಟುಂಬಗಳು ಮನೆ ಕಳೆದುಕೊಳ್ಳುತ್ತಿವೆ. ನೀರು ಕಡಿಮೆಯಾದಾಗ ಮತ್ತೆ ಮನೆ ನಿರ್ಮಿಸಲು ಪ್ರತಿ ವರ್ಷ ಕನಿಷ್ಠ 50 ಸಾವಿರ ರೂ. ಖರ್ಚು ಮಾಡಬೇಕಾಗಿದೆ. ಹೀಗಾಗಿ ಶಾಶ್ವತ ವಸತಿ ಕಲ್ಪಿಸಿಕೊಡುವಂತೆ ಇಲ್ಲಿಯ ನಿವಾಸಿಗಳು ಆಗ್ರಹಿಸಿದರು.
ಸತ್ತರೆ ಇಲ್ಲೇ ಸಾಯ್ತಿವಿ: ಮನೆ ಬಿಟ್ಟು ಗಂಜಿ ಕೇಂದ್ರಗಳಿಗೆ ಹೋಗುವಂತೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಶಾಶ್ವತ ಪರಿಹಾರ ಮಾತ್ರ ಕೊಡಲು ಮುಂದೆ ಬರುವುದಿಲ್ಲ. ಮಳೆಯಲ್ಲಿ ಮನೆ ಮುಳುಗಡೆಯಾದವರಿಗೆ ಪರಿಹಾರ ಕೊಡುವ ಬದಲು ಬೇರೆಯವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ ನಿಜವಾದ ಮುಳುಗಡೆಯಾದವರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಪರಿಹಾರ ಕಲ್ಪಿಸಬೇಕು. ಸತ್ತರೆ ಇಲ್ಲೇ ಸಾಯುತ್ತೇವೆ. ಆದರೆ ಮನೆ ಬಿಟ್ಟು ಮಾತ್ರ ಹೋಗುವುದಿಲ್ಲ ಎಂದು ಘೋಷಣೆ ಕೂಗಿದರು.
ಸಿಎಂ ಅಧಿಕಾರ ಸ್ವೀಕರಿಸಿದ ಮೊದಲ ಬಾರಿಗೆ ಅಥಣಿಗೆ ಸೋಮವಾರ ಬಿ.ಎಸ್. ಯಡಿಯೂರಪ್ಪ ಆಗಮನಕ್ಕಾಗಿ ಬಹುತೇಕ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ದಿಢೀರ್ ಪ್ರವಾಸ ರದ್ದುಗೊಂಡಿದ್ದರಿಂದ ಅಥಣಿ ಜನತೆಗೆ ನಿರಾಸೆಯನ್ನುಂಟು ಮಾಡಿತು. ಯಡಿಯೂರಪ್ಪ ಬರುತ್ತಿದ್ದಾರೆ ಎಂಬ ವಿಷಯ ತಿಳಿದು ಶಾಸಕ ಉಮೇಶ ಕತ್ತಿ, ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಆಗಮಿಸಿದ್ದರು. ಅಲ್ಲದೇ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿತ್ತು.