Advertisement

ಸಿಎಂ ಕೈಲಿ ಒಂದು ಕೆರೆ ಕಟ್ಟಲೂ ಆಗದು!

11:18 AM Jul 25, 2017 | Team Udayavani |

ಯಲಹಂಕ: ಸಿಎಂ ಸಿದ್ದರಾಮಯ್ಯರ ಯೋಗ್ಯತೆಗೆ ಒಂದು ಕೆರೆ ಕಟ್ಟುವುದಕ್ಕಾಗಿಲ್ಲ. ಮಾರಾಟ ಮಾಡಲು ಹೊರಟಿದ್ದಾರೆ ಇದು ನಾಚಿಕೆಗೇಡಿನ ಕೃತ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಟೀಕಿಸಿದರು.

Advertisement

ಬಿಜೆಪಿ ಹಾಗೂ ವಿಶ್ವವಾಣಿ ಫೌಂಡೇಷನ್‌ ಸಿಂಗನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಶಾಸಕ ಎಸ್‌.ಆರ್‌.ವಿಶ್ವನಾಥ್‌ರ 55ನೇ ವರ್ಷದ ಹುಟ್ಟು ಹಬ್ಬ ಪ್ರಯುಕ್ತ ಅಂಗವಿಕಲರಿಗೆ ತ್ರಿಚಕ್ರವಾಹನ ವಿತರಿಸಿ ಮಾತನಾಡಿ, ಕೆರೆಗಳನ್ನು ಉಳಿಸಬೇಕು. ಸಾಧ್ಯವಾದರೆ ಹೊಸ ಕೆರೆಗಳನ್ನು ನಿರ್ಮಾಣ ಮಾಡಬೇಕು.

ಅದನ್ನು ಬಿಟ್ಟು ಇರುವ ಕೆರೆಗಳನ್ನು ನಿರ್ಜೀವ ಕೆರೆ ಮಾಡಿ ರಿಯಲ್‌ ಎಸ್ಟೇಟ್‌ ದಂಧೆಗೆ ಹೊರಟಿದ್ದಾರೆ ಇದು ಹೇಡಿ ಕೃತ್ಯ. ಚುನಾವಣೆಗೆ ಹಣ ಸಂಗ್ರಹಿಸುವುದಕೋಸ್ಕರ ಇಂತಹ ಕೆಟ್ಟ ಕೆಲಸ ಮಾಡಲು ಮುಂದಾಗಿದ್ದಾರೆ. ಕೆರಗಳನ್ನು ಯಾವುದೇ ಕಾರಣಕ್ಕೂ ನಿರ್ಜೀವ ಮಾಡಲು ಬಿಡುವುದಿಲ್ಲ. ಬಿಜೆಪಿ ವತಿಯಿಂದ  ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಭಾರತ ಪ್ರಧಾನಿ ಮೋದಿಯವರ ಕೋಟೆಯಾಗಿದೆ. ಇಂತಹ ನಾಯಕರು ನಮಗೆ ಬೇಕು. ಮೋದಿಯವರ ಜನಪರ ಕೆಲಸಗಳನ್ನು ಇಡೀ ರಾಷ್ಟ್ರ ಬೆಂಬಲಿಸಿದೆ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಕರ್ನಾಟಕವನ್ನು ಮೋದಿ ಭದ್ರಕೋಟೆ ಮಾಡಬೇಕು ಎಂದರು. ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ನನ್ನ ಕ್ಷೇತ್ರದ ಎಲ್ಲಾ ಅಂಗ ವಿಕಲರಿಗೆ ತ್ರಿಚಕ್ರವಾಹನ ವಿತರಣೆ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

54 ಲಕ್ಷ ರೂ ವೆಚ್ಚದಲ್ಲಿ ಅಂಗವಿಕಲರಿಗೆ ತ್ರಿಚಕ್ರವಾಹನ ವಿತರಣೆ, ಬೃಹತ್‌ ರಕ್ತದಾನ ಶಿಬಿರದಲ್ಲಿ 510 ಯುನಿಟ್‌ ರಕ್ತ ಸಂಗ್ರಹ, ಟೆನ್ನಿಸ್‌ ಮತ್ತು ವಾಲಿಬಾಲ್‌ ಪಂದ್ಯಾವಳಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಓಟಗಾರರಿಂದ ಮಾರಥಾನ್‌ ಓಟ,  1500 ಜನಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ತರಬೇತಿ ಪಡೆದ ಮಹಿಳೆಯರಿಗೆ 500 ಹೊಲಿಗೆ ಯಂತ್ರ, ಕ್ಷೇತ್ರದ ಸರ್ಕಾರಿ ಶಾಲಾ ಮಕ್ಕಳಿಗೆ ಜಾಮಿಟ್ರಿ ಮತ್ತು ಪುಸ್ತಕ ವಿತರಣೆ,  ಯಲಹಂಕದಲ್ಲಿ ಈಜುಕೊಳ ,ಯಲಹಂಕ ಕೆರೆಯ ಸುತ್ತ ಎಲ್‌ಇಡಿಲೈಟ್‌ ಮತ್ತು ಓಪನ್‌ ಜಿಮ್‌ ಉದ್ಘಾಟನೆ ನಡೆಯಿತು.

Advertisement

ಭೂ ಕಬಳಿಕೆ ಸಂಬಂಧ ಸಿಎಂ ವಿರುದ್ಧ ದೂರು
ಬೆಂಗಳೂರು:
ಬೆಂಗಳೂರು ದಕ್ಷಿಣ ವಿಭಾಗದ ಹೊಗಸಂದ್ರ ಗ್ರಾಮದ 18.04 ಎಕರೆ ಕೆರೆ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಸೋಮವಾರ ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ಹೊಗಸಂದ್ರದಲ್ಲಿರುವ ಕೆರೆಗೆ ಈ ಮೊದಲು ಗೇರಬಾವಿ ಎಂದು ಹೆಸರಿಡಲಾಗಿತ್ತು. 1973ರಲ್ಲಿ ಹೊಸೂರು ಮುಖ್ಯರಸ್ತೆಯಲ್ಲಿರುವ ಈ  ಕೆರೆಯ 18.04 ಎಕರೆ ಜಮೀನಿನ ಪೈಕಿ ಮುನಿಸ್ವಾಮಪ್ಪ ಎಂಬುವರು 13.23 ಎಕರೆ ಸರ್ವೆ ನಂ 41ಕ್ಕೆ ನೊಂದಾಯಿಸಿಕೊಂಡಿದ್ದರು. ಆದರೆ, ಇದುವರೆಗೂ ಖಾತೆ ಆಗಿಲ್ಲ. ಈ ಮಧ್ಯೆ 1974ರಲ್ಲಿ ಮುನಿಸ್ವಾಮಪ್ಪ ನಿಧನ ಹೊಂದಿದ್ದರು.

ಬಳಿಕ ಇವರ ಕುಟುಂಬ ಸದಸ್ಯನಾದ ಎಂ.ಕೆ. ರಮೇಶ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಬಳಿಕ ರಮೇಶ್‌ ಈ ಸರ್ಕಾರಿ ಕೆರೆ ಜಾಗ ನಮ್ಮದು ಎಂದು ಹೇಳಿಕೊಂಡು, ಅಲ್ಲಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಜತೆಗೆ ಈ ಜಮೀನಿನ ಸರ್ಕಾರಿ ಮೊತ್ತ 500 ಕೋಟಿ ಇದ್ದು, 400 ಕೋಟಿ ರೂ. ನಿಗದಿ ಮಾಡಿದ್ದೆನೆಂದು ಹೇಳಿಕೊಳ್ಳುತ್ತಿದ್ದರು ಎಂದು ದಾಖಲೆಗಳ ಸಮೇತ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಖಾತೆ ಮಾಡಿಕೊಡಲು ಸೂಚನೆ: ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಜಮೀನನ್ನು 50 ಕೋಟಿ ರೂ.ಗೆ ಕೇಳಿದ್ದು, ನಮ್ಮ ಕುಟುಂಬ ಕೂಡ ಸಮ್ಮಿತಿ ಸೂಚಿಸಿದೆ. ಇದಕ್ಕಾಗಿ ಅವರು ಮುಂಗಡ ಹಣವನ್ನು ನೀಡಿದ್ದಾರೆ. ಇನ್ನುಳಿದ ಹಣವನ್ನು ನಮ್ಮ (ರಮೇಶ್‌) ಹೆಸರಿಗೆ ಖಾತೆಯಾದ ಬಳಿಕ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಈ ನಡುವೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಇದೇ ಸರ್ವೇ ನಂ 41 ವೀಸ್ತೀರ್ಣ 13.23 ಎಕರೆ ಜಾಗವನ್ನು ವಾರಸುದಾರ ಎಂ.ಕೆ. ರಮೇಶ್‌ ಹೆಸರಿಗೆ ಖಾತೆ ಮಾಡಿಕೊಡಲು ಸಿಎಂ ಸೂಚಿಸಿದ್ದಾರೆ ಎಂದು ರಾಮಮೂರ್ತಿಗೌಡ ದೂರಿನಲ್ಲ ಆರೋಪಿಸಿದ್ದಾರೆ.

ಜತೆಗೆ ಇದೇ ಸರ್ವೆ ನಂ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ನೇರವಾಗಿ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದಾಗ, ಈ ಅರ್ಜಿಯ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಸಹಿ ಹಾಕಿದ್ದಾರೆ.

ಈ ಮೂಲಕ ಭೂ ಕಬಳಿಕೆದಾರರನಿಗೆ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿ ಸಹಕಾರ ನೀಡಿದ್ದು, ಸುಮಾರು 500 ಕೋಟಿ ರೂ. ಮೊತ್ತದ ಜಾಗವನ್ನು ಮುಖ್ಯಮಂತ್ರಿಗಳು ಪರೋಕ್ಷವಾಗಿ ಕಬಳಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಮಮೂರ್ತಿಗೌಡ ದೂರಿನಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next