ಕಲಬುರಗಿ: ರಾಜ್ಯ ಸರ್ಕಾರ ಬಡವರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಮತ್ತು ಸ್ವಯಂ ಉದ್ಯೋಗ ನೀಡುವ ತರಬೇತಿ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಹಾಕಿಕೊಂಡು ಹೊರಟಿದ್ದು, ಫಲಾನುಭವಿಗಳು ಯೋಜನೆಗಳ ಲಾಭಗಳನ್ನು ಪಡೆದು ಬದುಕು ಕಟ್ಟಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಗರದ ಬಸವರಾಜಪ್ಪ ಅಪ್ಪಾ ಸಭಾ ಭವನದ ಪಕ್ಕದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
ನಿರುದ್ಯೋಗವನ್ನು ಹೊಡೆದೋಡಿಸುವುದು ಮೊದಲ ಆದ್ಯತೆ ಆಗಿದೆ. ಹತ್ತು-ಹಲವು ಕೌಶಲ್ಯದ ತರಬೇತಿ ನೀಡಿ ಸ್ವಯಂ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕವಾಗಿ ಸದೃಢ ಮಾಡುವ ದಿಸೆಯಲ್ಲಿ ನಿಗಮದ ವತಿಯಿಂದ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಅಲ್ಪ ಸಂಖ್ಯಾತ ಸಮುದಾಯದ ಬಂಧುಗಳು ಸಮರ್ಪಕವಾಗಿ ಬಳಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಉನ್ನತ ವ್ಯಾಸಂಗಕ್ಕಾಗಿ ಅಲ್ಪ ಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಅರಿವು ಯೋಜನೆವಿದ್ದು, ಲಾಭವನ್ನು ನಾಡಿನ ಹತ್ತಾರು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಶ್ರಮ ಶಕ್ತಿ ಯೋಜನೆ, ಗಂಗಾ ಕಲ್ಯಾಣ, ಗೂಡ್ಸ್ ಟ್ಯಾಕ್ಸಿ ವಾಹನ ಸೇರಿದಂತೆ ಹಲವು ಯೋಜನೆಗಳಿವೆ ಎಂದು ನುಡಿದರು.
ನಿಗಮದ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತರ ಬದುಕು ಹಸನು ಮಾಡುವುದಕ್ಕಾಗಿ ನಿಗಮದ ಹತ್ತಾರು ಕಾರ್ಯಕ್ರಮಗಳಿವೆ. ಮುಖ್ಯ ಮಂತ್ರಿಗಳು ಅಲ್ಪಸಂಖ್ಯಾತ ಸಮುದಾಯದ ಬಂಧುಗಳಿಗಾಗಿ ವಿಶೇಷವಾಗಿ ಕಾಳಜಿ ವಹಿಸಿದ್ದಾರೆ ಎಂದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ, ಸಂಸದ ಡಾ| ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ಡಾ| ಅವಿನಾಶ ಜಾಧವ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸೇರಿದಂತೆ ಮುಂತಾದವರಿದ್ದರು. ನಿಗಮದ ನಿರ್ದೇಶಕ ಸುರೇಶ ಎಸ್. ತಂಗಾ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.
ನಿಗಮದ ನಿರ್ದೇಶಕರಾದ ಸದ್ದಾಂ ಹುಸೇನ ವಂದಿಸಿದರು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಮಹಿಮೂದ್ ಎಸ್., ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಹಜರತ್ ಅಲಿ, ಮುಖಂಡರಾದ ಅಬ್ದುಲ್ ರಬ್, ಕೆ.ಎಂ.ಬಾರಿ, ರಾಜೇಂದ್ರ ಕುಣಚಗಿ, ಬಲಬಿಂದರ್ ಸಿಂಗ್, ರಮೇಶ ಬೆಳಕೇರಿ ಇತರರಿದ್ದರು.