Advertisement

ಗಾಂಧಿ, ಪೇಜಾವರ ಶ್ರೀಗಳ ಕನಸು ನನಸು: ಬಿಎಸ್‌ವೈ

02:26 AM Jan 19, 2021 | Team Udayavani |

ಉಡುಪಿ: ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧೀಜಿ ಮತ್ತು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಕನಸು ನನಸಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ಶ್ರೀಕೃಷ್ಣ ಮಠದ ದ್ವೆ„ವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯ ಪಂಚ ಶತಮಾನೋತ್ಸವವನ್ನು ಸೋಮವಾರ ಉದ್ಘೋಷಿಸಿ ಅವರು ಮಾತನಾ ಡಿದರು. ಇದೇ ಸಂದರ್ಭ ಭಕ್ತರ ದೇವರ ದರ್ಶನಕ್ಕೆ ನಿರ್ಮಿಸಿದ ನೂತನ ಮಾರ್ಗ “ವಿಶ್ವಪಥ’ವನ್ನು ಮತ್ತು ಕರಕುಶಲ ಮಳಿಗೆಯನ್ನು ಉದ್ಘಾಟಿಸಿದರು.

ವಾದಿರಾಜರ ಗುಣಗಾನ :

ವಾದಿರಾಜ ತೀರ್ಥರು ಪರ್ಯಾಯ ಪದ್ಧತಿಯನ್ನು ನಾಡಹಬ್ಬವಾಗಿ ಪರಿವರ್ತಿಸಿದರು. ಪರಕೀಯರ ಪ್ರಭಾವದಿಂದ ರಕ್ಷಿಸುವಲ್ಲಿ ಮತ್ತು ಚದುರಿ ಹೋದ ಸಮಾಜವನ್ನು ಸಂಘಟಿಸುವಲ್ಲಿ ವಾದಿರಾಜರ ಕೊಡುಗೆ ಸ್ಮರಣೀಯವಾದುದು. ಶ್ರೀ ವಿಬುಧೇಶತೀರ್ಥ ಶ್ರೀಪಾದರು ಅದಮಾರು ಮಠ ಶಿಕ್ಷಣ ಸಂಸ್ಥೆಯು ಹಳ್ಳಿ ಯಿಂದ ದಿಲ್ಲಿವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು, ಪರ್ಯಾಯ ಮಠಾ ಧೀಶರು ಕರಕುಶಲಕಲೆ, ನೇಕಾರಿಕೆ, ಕುಂಬಾರಿಕೆಯಂಥ ಸ್ಥಳೀಯ  ಕೌಶಲ ಗಳಿಗೆ ಬೆಂಬಲ ನೀಡುವುದು ಮಠದ ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದರು.

ರಾಷ್ಟ್ರಮುಖಿ ಕೆಲಸ :

Advertisement

ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮಠಗಳು ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಸೇರಿದಂತೆ ಹತ್ತು ಹಲವು ಮುಖದಲ್ಲಿ ಸಮಾಜ ಹಾಗೂ ರಾಷ್ಟ್ರಮುಖೀಯಾಗಿ ಕೆಲಸಗಳನ್ನು ಮಾಡುತ್ತಿವೆ. ಅದನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.

ಸಂಸ್ಕೃತಿ ಮತ್ತು ಸಂಸ್ಕಾರ ಸೇರಿದ ಜನರಿಂದ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಇವೆರಡಕ್ಕೆ ಮಹತ್ವ ಕೊಡುವ ವ್ಯಕ್ತಿಗಳು ಸರಕಾರದಲ್ಲಿ ಇರಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನವಿರಲಿ ಎಂದು ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದರು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಸಂಸದೆ ಶೋಭಾ ಕರಂದ್ಲಾಜೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಸಂಸದೀಯ ಕಾರ್ಯ ದರ್ಶಿ ಜೀವರಾಜ್‌, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಶ್ರೀ ಕ್ಷೇತ್ರ ಕಟೀಲು ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಎಂಡಿ ಹಾಗೂ ಸಿಇಒ ರಾಜಕಿರಣ್‌ ರೈ ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್‌ ಸ್ವಾಗತಿಸಿದರು. ಕೃಷ್ಣರಾಜ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ ಬ್ರಾಹ್ಮಣ ಯುವಕ ವೃಂದ, ಉಡುಪಿಯ ಎಚ್‌. ಕೃಷ್ಣ ಭಟ್‌, ಯುವವಾಹಿನಿ ಉಡುಪಿ ಘಟಕ, ಪಾಕಶಾಸ್ತ್ರಜ್ಞ ಅಚ್ಯುತ ಭಟ್‌, ಉದ್ಯಮಿ ಭುವನೇಂದ್ರ ಕಿದಿಯೂರು, ದೈವಜ್ಞ ಬ್ರಾಹ್ಮಣರ ಸಂಘ, ದೈವಜ್ಞ ಬ್ರಾಹ್ಮಣ ಯುವಕ ಸಂಘವನ್ನು ಸಮ್ಮಾನಿಸಲಾಯಿತು.

ಗೋಹತ್ಯೆ ನಿಷೇಧ ಕಾಯಿದೆ  ಜಾರಿ,  ರಾಮಲಲ್ಲಾ ಪ್ರತಿಷ್ಠೆ :

ಗಾಂಧೀಜಿ, ಪೇಜಾವರ ಶ್ರೀಗಳವರು ರಾಮರಾಜ್ಯ, ಗೋಹತ್ಯೆ ನಿಷೇಧದ ಕನಸನ್ನು ಹೊಂದಿದ್ದರು. ನಾನೀಗ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸಿ ಇಲ್ಲಿಗೆ ಬಂದಿದ್ದೇನೆ. ಅಯೋಧ್ಯೆಯಲ್ಲಿ ಹಳೆಯ ಕಟ್ಟಡವನ್ನು ಕೆಡವಿದ ಬಳಿಕ ಪೇಜಾವರ ಶ್ರೀಗಳು ರಾಮಲಲ್ಲಾನನ್ನು ತುರ್ತಾಗಿ ಪ್ರತಿಷ್ಠಾಪಿಸುವ ಸಂದರ್ಭ ನಾನು ಅಲ್ಲಿದ್ದೆ. ಇದು ನನ್ನ ಜೀವನದ ದೊಡ್ಡ ಸೌಭಾಗ್ಯ. ಇಂದು ರಾಮಮಂದಿರದ ನಿರ್ಮಾಣ ನನಸಾಗುತ್ತಿದೆ. ಪೇಜಾವರ ಶ್ರೀಗಳು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಜನಸಾಮಾನ್ಯರೂ ತಮ್ಮ ಕೈಲಾದ ಧನಸಹಾಯ ಮಾಡುತ್ತಿದ್ದಾರೆ ಎಂದು ಬಿಎಸ್‌ವೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next