Advertisement

ಮುಂಜಾಗ್ರತೆ ಆದೇಶ ಉಲ್ಲಂಘಿಸಿದ ಸಿಎಂ ಬಿಎಸ್‌ವೈ!

10:23 AM Mar 17, 2020 | Lakshmi GovindaRaj |

ಬೆಳಗಾವಿ: ಕೊರೊನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸ್ವತ: ಸಿಎಂ ಯಡಿಯೂರಪ್ಪ ಭಾನುವಾರ ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಉಲ್ಲಂಘಿಸಿದ ಪ್ರಸಂಗ ನಡೆಯಿತು.

Advertisement

ಕೊರೊನಾ ಸೋಂಕು ಹರಡದಂತೆ ಒಂದು ವಾರದ ಮಟ್ಟಿಗೆ ಒಂದೇ ಕಡೆ 100ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿ ಸಿದೆ. ಮದುವೆ, ಸಭೆ-ಸಮಾರಂಭದಲ್ಲಿ 100ಕ್ಕಿಂತ ಹೆಚ್ಚು ಜನ ಸೇರಬಾರದೆಂದು ಯಡಿಯೂರಪ್ಪನವರೇ ಆದೇಶ ಮಾಡಿದ್ದಾರೆ. ಆದರೆ, ನಗರದ ಶಗುನ್‌ ಗಾರ್ಡನ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದ ಕವಟಗಿಮಠ ಅವರ ಪುತ್ರಿ ಮದುವೆಯಲ್ಲಿ ಭಾಗವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಚರ್ಚೆಗೆ ಕಾರಣವಾಯಿತು.

ಎರಡೂ ಕಡೆಗಳಲ್ಲಿ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್‌ ಅಳವಡಿಸಲಾಗಿತ್ತು. ಕೈ ತೊಳೆಯಲು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಒಳಗೆ ಪ್ರವೇಶಿಸಲು ಮಾಸ್ಕ್ ಇಡಲಾಗಿತ್ತು. ಆದರೆ, ಮಾಸ್ಕ್ ಕೊರತೆಯಿಂದಾಗಿ ಕೆಲವರು ಹಾಗೆಯೇ ಒಳಗೆ ಹೋಗು ತ್ತಿರುವುದು ಕಂಡು ಬಂತು.

ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಗಲಿಬಿಲಿಗೊಂಡು ಉತ್ತರಿಸದೇ ಹೊರ ನಡೆದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಳ್ಳಲಿಲ್ಲ. ಆದೇಶ ಉಲ್ಲಂಘನೆ ಆಗುತ್ತಿದ್ದರೂ ಸುಮ್ಮನೆ ಇದ್ದಿದ್ದು ಕಂಡು ಬಂತು.

ಯಡಿಯೂರಪ್ಪನವರು ಮದುವೆಗೆ ಬರುವ ಮುನ್ನವೇ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ, ಶಶಿಕಲಾ ಜೊಲ್ಲೆ, ಸಂಸದರಾದ ಡಾ.ಪ್ರಭಾಕರ ಕೋರೆ, ಶೋಭಾ ಕರಂದ್ಲಾಜೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಶಾಮನೂರು ಶಿವಶಂಕರಪ್ಪ, ಗಣೇಶ ಹುಕ್ಕೇರಿ, ಆನಂದ ಮಾಮನಿ ಸೇರಿದಂತೆ ಬಿಜೆಪಿ ಮಾಜಿ ಶಾಸಕರು, ಮುಖಂಡರು, ಕುಟುಂಬಸ್ಥರು ಭಾಗವಹಿಸಿದ್ದರು.

Advertisement

ತಪಾಸಣೆ ಮಾಡಿಸಲಿಲ್ಲ!: ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳದೇ ಯಡಿಯೂರಪ್ಪ ನೇರವಾಗಿ ನಿಲ್ದಾಣದಿಂದ ಹೊರ ನಡೆದರು. ವಿಮಾನ ಇಳಿಯುತ್ತಿದ್ದಂತೆ ವಿಶ್ರಾಂತಿ ಕೊಠಡಿಗೆ ತೆರಳಿದರು. ಅಲ್ಲಿಯೇ ಇದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಕಡೆಗೆ ತಿರುಗಿಯೂ ನೋಡದ ಸಿಎಂ, ಅಲ್ಲಿಂದ ನೇರವಾಗಿ ಹೊರ ಬಂದು ಮಾಧ್ಯಮದವ ರೊಂದಿಗೆ ಮಾತನಾಡಿದರು.

ವಿಮಾನದಲ್ಲಿ ಬರುವ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ವಿಮಾನ ನಿಲ್ದಾಣದಲ್ಲಿ ಸಿದ್ಧತೆ ಮಾಡಿ ಕೊಂಡಿದ್ದು, ಸಿಬ್ಬಂದಿ ನೇಮಿಸಲಾಗಿದೆ. ವಿಮಾನದಲ್ಲಿ ಬರುವ ಪ್ರತಿಯೊಬ್ಬರ ಸ್ಕ್ರೀನಿಂಗ್‌ ತಪಾಸಣೆ ನಡೆಸಲಾಗುತ್ತಿದೆ. ಆದರೆ, ಈ ವೈದ್ಯಕೀಯ ತಪಾಸಣೆಯಿಂದ ಸಿಎಂ ತಪ್ಪಿಸಿಕೊಂಡು ಹೊರ ನಡೆದರು.

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಶಿಕ್ಷಣ ಸಂಸ್ಥೆಗಳು, ಮಾಲ್‌ಗ‌ಳನ್ನು ಒಂದು ವಾರ ಕಾಲ ಬಂದ್‌ ಮಾಡಲಾಗಿದ್ದು, ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ. 1 ವಾರದ ನಂತರ ಪರಿಶೀಲನೆ ಮಾಡಿ ಮುಂದೇನು ಮಾಡಬೇಕೆಂದು ತೀರ್ಮಾನಿಸಲಾಗುವುದು. ಶನಿವಾರ, ಭಾನುವಾರ ಹೊಸ ಕೊರೊನಾ ಪ್ರಕರಣ ಕಂಡು ಬಂದಿಲ್ಲ. ವಿದೇಶ ದಿಂದ ಬಂದ 6 ಜನರ ಆರೋಗ್ಯ ಸುಧಾರಿಸುತ್ತಿದೆ. ಹುಬ್ಬಳ್ಳಿಯಲ್ಲೂ ಆದಷ್ಟು ಶೀಘ್ರ ರಕ್ತಪರೀಕ್ಷೆ ಲ್ಯಾಬ್‌ ಸ್ಥಾಪಿಸಲಾಗುವುದು.
-ಬಿ.ಎಸ್‌.ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next