ತಮ್ಮ ನಡೆ-ನುಡಿಯಿಂದಾಗಿಯೇ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ “ಕಾಮನ್ ಮ್ಯಾನ್” ಸಿಎಂ ಎಂದು ಹೆಸರು ಗಳಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಳೆದ ಎರಡು ತಿಂಗಳಿಂದ ವದಂತಿಯ ಅಲೆಯಲ್ಲಿ ಮರೆಯಾಗಿದ್ದರು. ರಾಜಕೀಯ ಪಕ್ಷಗಳ ಛಾವಡಿಯಲ್ಲಿ, ಮಾಧ್ಯಮಗಳ ವಿಶೇಷ ವರದಿಗಳಲ್ಲಿ ಸಿಎಂ ಬದಲಾವಣೆ ಎಂಬ ಗಾಳಿ ಸುದ್ದಿಯೇ ಹೆಚ್ಚು ಮನ್ನಣೆ ಪಡೆದುಕೊಂಡುಬಿಟ್ಟಿತ್ತು. ಹೀಗಾಗಿ ಬಸವರಾಜ್ ಬೊಮ್ಮಾಯಿ ಅಲ್ಪಾವಧಿಯಲ್ಲೇ ಅಧಿಕಾರದ ಗಾಧಿ ಖಾಲಿ ಮಾಡಬೇಕಾಗಬುದೇನೋ ಎಂಬ ವಾತಾವರಣ ದಟ್ಟವಾಗಿತ್ತು. ಹೀಗಾಗಿ ಬೊಮ್ಮಾಯಿ ಅವರು ಏನೇ ಮಾಡಿದರೂ ಅಂತೆಕಂತೆಗಳ ಅಲೆಯಲ್ಲಿ ಮರೆಯಾಗಿ ಹೋಗುತ್ತಿತ್ತು.
Advertisement
ಆದರೆ ಈಗ ಮತ್ತೆ ಪರಿಸ್ಥಿತಿ ಬದಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ, ಅದಕ್ಕೂ ಮುನ್ನ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಬಳಿಕ ಬೊಮ್ಮಾಯಿ ಅವರ ಅಧಿಕಾರದ ಸುತ್ತ ಆವರಿಸಿಕೊಂಡಿದ್ದ ಪದತ್ಯಾಗದ ವಾತಾವರಣ ಮರೆಯಾಗಿದೆ. “ಮಂಡಿ ನೋವಿ’’ನ ಜತೆಗೆ ಅಪ್ಪಿಕೊಂಡ ರಾಜಕೀಯದ “ಮಂಡೆ ನೋವಿ”ನಿಂದ ಬಸವರಾಜ್ ಬೊಮ್ಮಾಯಿ ಮುಕ್ತರಾದಂತೆ ಕಾಣುತ್ತಿದ್ದು ಅವರ “ಕಾಮನ್ ಮ್ಯಾನ್ ಅಪ್ರೋಚ್’’ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ.
Advertisement
ಇದಕ್ಕೆ ಹೊಸ ವರ್ಷದ ಮೊದಲ ದಿನದಿಂದಲೇ ಅವರು ಆಡುತ್ತಿರುವ ಆತ್ಮವಿಶ್ವಾಸದ ಮಾತುಗಳೇ ಸಾಕ್ಷಿ. ವರ್ಷಾಂತ್ಯಕ್ಕೆ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಿರುವ ಅವರು “ಅಧಿಕಾರಶಾಹಿತ್ವ”ದ ಮಹತ್ವದ ಬಗ್ಗೆ ಪಾಠ ಮಾಡಿದ್ದಾರೆ. ಅದಕ್ಕಾಗಿ ಅವರು ನೀಡಿರುವ ಉದಾಹರಣೆ ಪುಟ್ಬಾಲ್ ಆಟ. ಪುಟ್ಬಾಲ್ ಆಟದಲ್ಲಿ ಎರಡು ತಂಡಗಳಿರುತ್ತವೆ. ಎರಡೂ ತಂಡದ ಆಟಗಾರರು ಒಂದೇ ಚಂಡಿಗಾಗಿ ಓಡಿ ಬೆವರು ಇಳಿಸುತ್ತಾರೆ. ಇಬ್ಬರ ಉದ್ದೇಶವೂ ಜಯಗಳಿಸುವುದು. ಅದೇ ರೀತಿ ಅಧಿಕಾರದಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗ ಜನಹಿತ ಎಂಬ ಚೆಂಡಿನ ಹಿಂದೆ ಓಡಬೇಕೆಂದು ಕಿವಿಮಾತು ಹೇಳಿದ್ದಾರೆ. “ಬಾಸಿಸಮ್’’ ಪರದೆಯಿಂದ ನಾವೆಲ್ಲರೂ ಹೊರ ಬರಬೇಕೆಂದು ನೀಡಿರುವ ಖಡಕ್ ಸೂಚನೆ ತಳಹಂತದ ವರೆಗೂ ವ್ಯಾಪಿಸಿದರೆ ಆಡಳಿತ ಯಂತ್ರಕ್ಕೆ ಚುರುಕು ಮೂಡದೇ ಇದ್ದೀತೇ ?
ಇನ್ನು ಕಳೆದ ಕೆಲ ತಿಂಗಳಿಂದ ರಾಜಧಾನಿ ಬೆಂಗಳೂರು ಆಡಳಿತಾತ್ಮಕವಾಗಿ ಸೊರಗಿ ಹೋಗಿತ್ತು. ರಸ್ತೆ ಗುಂಡಿಗಳನ್ನೇ ಮುಚ್ಚಲಾರದಂಥ ಹಂತಕ್ಕೆ ಸ್ಥಳೀಯ ಆಡಳಿತ ಜಾರಿತ್ತು. ಆದರೆ ಭಾನುವಾರದ ದಿನವೂ ರಾಜಧಾನಿಯ ಅಭಿವೃದ್ಧಿಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆಗೆ ಮ್ಯಾರಥಾನ್ ಸಭೆ ನಡೆಸಿರುವ ಬೊಮ್ಮಾಯಿ ಜಡ್ಡುಗಟ್ಟಿದ್ದ ಆಡಳಿತಕ್ಕೆ ಮತ್ತೆ ಚುರುಕು ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜಸ್ವ ಸಂಗ್ರಹಣೆಯ ಕಡೆಗೂ ಅವರು ಗಮನ ನೀಡಿರುವುದು ಮುಂದಿನ ಬಜೆಟ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ನೆಲಕಚ್ಚಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡುವುದಕ್ಕಾಗಿ ಮುದ್ರಾಂಕ ಶುಲ್ಕವನ್ನು ಇಳಿಸಿ ಹೊಸ ನೋಂದಣಿ ಕಾರ್ಯಕ್ಕೆ ಚುರುಕು ನೀಡುವುದಕ್ಕೆ ಮುಂದಾಗಿದ್ದಾರೆ. ಪ್ರತಿ ದಿನ ಹತ್ತು ಗಂಟೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಮಾತ್ರವಲ್ಲ ಅದರಂತೆ ನಡದುಕೊಳ್ಳಲು ಆರಂಭಿಸಿದ್ದಾರೆ. ಮದುವೆ- ಮನೋರಂಜನಾ ಕಾರ್ಯಕ್ರಮಗಳಿಗೇ ಮೀಸಲಿರುತ್ತಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮ ಪಟ್ಟಿಯಲ್ಲಿ ಮತ್ತೆ ಜಿಲ್ಲಾ ಪ್ರವಾಸಗಳು ಕಾಣಿಸಿಕೊಳ್ಳುತ್ತಿದೆ. ಅನಿಶ್ಚಿತತೆಯ ಬೆದರಿಕೆ ಇಲ್ಲದೇ ಇದ್ದಾಗ ಮಾತ್ರ ವ್ಯಕ್ತಿ ಚೇತೋಹಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಎಂಬುದೇ ಈ ನಡೆಯ ಹಿಂದಿರುವ ಗುಟ್ಟು.
ಎಲ್ಲದಕ್ಕಿಂತ ಮುಖ್ಯವಾಗಿ ಮುಂದಿನ ಒಂದುಕಾಲು ವರ್ಷ ಚುನಾವಣಾ ಪರ್ವ. ಈ ಸಂದರ್ಭದಲ್ಲಿ ಆಡಳಿತದ ಜತೆಗೆ ರಾಜಕೀಯ ಸ್ಟ್ರೋಕ್‍ಗಳು ಮಹತ್ವ ಪಡೆದುಕೊಳ್ಳುತ್ತವೆ. ಆ ಪೈಕಿ ಮತಾಂತರ ನಿಷೇಧ ಕಾಯಿದೆ ಜಾರಿಯೂ ಒಂದು. ಬಿಜೆಪಿಯ ಹಿಂದುತ್ವದ ವೋಟ್ ಬ್ಯಾಂಕ್ ಗಟ್ಟಿಗಳಿಸಿಕೊಳ್ಳುವುದಕ್ಕಾಗಿ ಬೊಮ್ಮಾಯಿ ನಿರ್ಭಿಡೆಯಿಂದ ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದರು. ಮಾತ್ರವಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಕ್ಕೆ ಬೇಕಾದ ಸಂದರ್ಭವನ್ನು ಸಾಕ್ಷ್ಯ ಸಮೇತ ಸದನದಲ್ಲೇ ಸೃಷ್ಟಿ ಮಾಡಿದರು. ಎಂಇಎಸ್ ಪುಂಡರ ಹಾವಳಿಯನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕರೆಕೊಟ್ಟಿದ್ದ ಕನ್ನಡಪರ ಸಂಘಟನೆಗಳನ್ನು ಮಾತುಕತೆಯ ಮೂಲಕವೇ ಮೆತ್ತಗಾಗಿಸಿದರು. ತಮ್ಮ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುವುದು ಎಂದು ಹೈಕಮಾಂಡ್ ಅಭಯ ಸಿಕ್ಕಿರುವುದರಿಂದ ಈಗ ಬೊಮ್ಮಾಯಿಯವರ ಚಿತ್ತ ಬಜೆಟ್ ಮೇಲೆ ನೆಟ್ಟಿದೆ. ಹಣಕಾಸು ವಿಚಾರದಲ್ಲಿ ಹೆಚ್ಚಿನ ಜ್ಞಾನವನ್ನೂ ಹೊಂದಿರುವ ಬೊಮ್ಮಾಯಿ ತಮ್ಮ ಮೊದಲ ಬಜೆಟ್‍ನಲ್ಲಿ “ಕಾಮನ್ ಮ್ಯಾನ್” ಗಳ ಆಶೋತ್ತರವನ್ನು ಈಡೇರಿಸಬಲ್ಲರೇ ಎಂಬ ಪ್ರಶ್ನೆ ಈಗ ಎಲ್ಲರನ್ನು ಆವರಿಸಿಕೊಂಡಿದೆ. ಸಿಎಂ ಎಂದರೆ ಕಾಮನ್ ಮ್ಯಾನ್ ಎಂದವರು ಜನಸಾಮಾನ್ಯರ ಹಿತವನ್ನು ಅಲಕ್ಷಿಸಲಾರರಲ್ಲವೇ ?