ಹುಬ್ಬಳ್ಳಿ: ಚುನಾವಣಾ ಉತ್ತರ ಸಮೀಕ್ಷೆಗಳು ಏನೇ ಹೇಳಲಿ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2018ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬರಲಿದ್ದು ಬಿಜೆಪಿ ಎರಡನೇ ಸ್ಥಾನದಲ್ಲಿರಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದವು. ಆದರೆ 104 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಈಗಲೂ ನನಗೆ ವಿಶ್ವಾಸವಿದೆ, ಬಿಜೆಪಿ ಪೂರ್ಣಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರಚಾರ ಹಾಗೂ ರೋಡ್ ಶೋ ನಡೆಸಿರುವುದು ಪಕ್ಷಕ್ಕೆ ಅನುಕೂಲವಾಗಿದ್ದು ವಿಶೇಷವಾಗಿ ಯುವಕರು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ನುಡಿದರು.
ಶಿಗ್ಗಾಂವ್ ಕ್ಷೇತ್ರದ ಮತದಾರರು ಈ ಬಾರಿಯೂ ನನಗೆ ತೋರಿದ ಪ್ರೀತಿ ಮತದಾನ ಸಂದರ್ಭದಲ್ಲಿ ಸೃಷ್ಟಿಸಿದ ಹಬ್ಬದ ವಾತಾವರಣಕ್ಕೆ ನಾನು ಚಿರಋಣಿಯಾಗಿದ್ದೇನೆ ಅಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದೇನೆ ಎಂದರು.