ಹುಬ್ಬಳ್ಳಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಹಚ್ಚಿನ ಹಣ ನೀಡಿದ್ದರಿಂದಲೇ ಅವರು ರಾಜ್ಯಕ್ಕೆ ಬಂದಾಗಲೊಮ್ಮೆ ಅಭಿವೃದ್ಧಿ ಯೋಜನೆಗಳ ಭೂಮಿಪೂಜೆ, ಲೋಕಾರ್ಪಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ ರೈಲ್ವೆ, ಬಂದರು ಹಾಗೂ ರಾಷ್ಟ್ರೀಯ ಹೆದ್ಧಾರಿಗೆ ಹೆಚ್ಚಿನ ಅನುದಾನ ನೀಡಿದೆ ಎಂದು ತಿಳಿಸಿದರು.
ಮಾ.12 ರಂದು ಧಾರವಾಡಕ್ಕೆ ಆಗಮಿಸುವ ಪ್ರಧಾನಿಯವರು ಐಐಟಿ ಲೋಕಾರ್ಪಣೆ ಹಾಗೂ ಜಯದೇವ ಆಸ್ಪತ್ರೆ ಗೆ ಶಂಕುಸ್ಥಾಪನೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಧಾರವಾಡ ಐಐಟಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಹೆಚ್ಚಿನ ಅನುದಾನ ಮೂಲಕ ದೇಶದಲ್ಲೇ ನಂಬರ್ ಒನ್ ಐಐಟಿ ಮಾಡಲಾಗುವುದು ಎಂದರು.
Related Articles
ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಬೇಲೇಕೇರೆ ಬಂದರು ಅಭಿವೃದ್ಧಿ ಸೇರಿದಂತೆ ಒಟ್ಟು 12 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಎರಡು ಬಂದರು ಯೋಜನೆಗಳನ್ನು ರಾಜ್ಯ ಸರಕಾರದಿಂದ ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದರು.
ಕಳಸಾ-ಬಂಡೂರಿ ನಾಲಾ ಯೋಜನೆಗೆ ಟೆಂಡರ್ ಕರೆಯಲು ಅಂತಿಮ ಯತ್ನಗಳು ನಡೆದಿದ್ದು ಶೀಘ್ರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬಿಜೆಪಿಗೆ 65 ಸ್ಥಾನಗಳು ಬರುತ್ತವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆ ಬರುವ ಸ್ಥಾನಗಳವು. ತಪ್ಪಿ ಬಿಜೆಪಿ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ನನ್ನ ಹಾಗೂ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿ, ಬಿಜೆಪಿ ಯಾತ್ರೆ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಒಂದೂವರೆ ತಿಂಗಳಿನಿಂದ ಜನರ ಪ್ರಮಾಣ ಇನ್ನು ಹೆಚ್ಚಿದ್ದು, ಬಿಜೆಪಿ ಪೂರ್ಣ ಪ್ರಮಾಣದ ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಚುನಾವಣೆ ವೇಳೆ ಪಕ್ಷಾಂತರ ಸಹಜ ಪ್ರಕ್ರಿಯೆ ಕಾಂಗ್ರೆಸ್ ನಿಂದಲೂ ಬರುವವರು ಇದ್ದಾರೆ ಕಾದು ನೋಡಿ ಎಂದರು.
ಬಿಜೆಪಿ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿಕೆ ಸಮೀಕ್ಷೆ, ಎದುರಾಳಿ ಅಭ್ಯರ್ಥಿ, ಕ್ಷೇತ್ರದ ಜನರ ಅನಿಸಿಕೆಗಳ ಮೇಲೆ ನಿರ್ಧಾರವಾಗಲಿದ್ದು, ಎಲ್ಲರಿಗೂ ಟಿಕೆಟ್ ಸಿಗುತ್ತೆ, ಸಿಗಲ್ಲ ಎಂದು ಹೇಳಲಾಗದು. ಮಾಜಿ ಸಿಎಂ ಯಡಿಯೂರಪ್ಪ ಅವರು ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕಷ್ಟ ಎಂದಿರುವುದು ಅವರ ಅನುಭವ ಹಾಗೂ ಕೆಲ ಮಾಹಿತಿಯಿಂದ ಹೇಳಿರಬಹುದು, ಅದನ್ನು ನಾವು ಗೌರವಿಸುತ್ತೇವೆ ಎಂದರು.