ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ನಿರುದ್ಯೋಗ ಹೋಗಲಾಡಿಸಲು, ಶೈಕ್ಷಣಿಕವಾಗಿ ಬಲವರ್ಧನೆಗಾಗಿ ನಮ್ಮ ಸರಕಾರ ಬದ್ಧವಾಗಿದೆ. ಮುಂದಿನ ಬಜೆಟ್ ನಲ್ಲಿ ಐದು ಸಾವಿರ ಕೋಟಿ ರೂ. ಕಲ್ಯಾಣದ ಅಭಿವೃದ್ಧಿಗೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಎನ್ ವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ನಾನಾ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲ್ಯಾಣದ 7 ಜಿಲ್ಲೆಗಳ ಸಂಪೂರ್ಣ ನೀರಾವರಿಗೆ ಆದ್ಯತೆ ನೀಡಲಾಗುತ್ತಿದೆ. ಕಲ್ಯಾಣದಲ್ಲಿ ಕ್ಷೀರ ಕ್ರಾಂತಿಗೆ ದೃಢ ಹೆಜ್ಜೆ ಇಟ್ಟಿದ್ದು, ನೈತಿಕವಾಗಿ ಈ ಭಾಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬಲಪಡಿಸಲಾಗುವುದು. ಕಲಬುರಗಿಯಲ್ಲಿ ಟೆಕ್ಸಟೈಲ್ ಪಾರ್ಕ್ ಶೀಘ್ರ ಆರಂಭಿಸಲಾಗುವುದು. ಈ ಭಾಗಕ್ಕೆ ಐಟಿ ಕ್ಲಸ್ಟರ್ ಮಾಡುತ್ತೇವೆ. ಬೀದರ್ ನಲ್ಲಿ ಪ್ಲಾಸ್ಟಿಕ್ ಇಂಡಸ್ಟ್ರಿ ಮಾಡುತ್ತೇವೆ. ಜನ ಗುಳೇ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೊಡ್ದ ಪ್ರಯತ್ನ ಮಾಡಲಾಗುವುದು ಎಂದರು.
ಕಲ್ಯಾಣ ಎಂದು ಹೆಸರು ಬದಲಿಸದರೆ ಸಾಲದು, ವಾಸ್ತವಿಕವಾಗಿ ಪ್ರದೇಶದ ಅಭಿವೃದ್ಧಿ ಚಿತ್ರಣವು ಬದಲಾಗಬೇಕೆಂಬ ಅಭಿಲಾಷೆಯಿಂದ 371ಜಿ ಆನ್ವಯ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ ಮೂರು ವರ್ಷದಲ್ಲಿ 4,125 ಕೋಟಿ ರೂ. ಹಂಚಿಕೆ ಮಾಡಿದೆ. 3,650 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 3,30 ಕೋಟಿ ರೂ, ಖರ್ಚು ಮಾಡಲಾಗಿದೆ. ಒಟ್ಟಾರೆ 8,503 ಕಾಮಗಾರಿಗಳ ಪೈಕಿ 5,166 ಕಾಮಗಾರಿ ಪೂರ್ಣಗೊಳಿಸಿದು 2,716 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಪ್ರಸಕ್ತ ಸಾಲಿನಲ್ಲಿ ದಾಖಲೆಯ 3,000 ಕೋಟಿ ರೂ. ಅಮೃತ ಅಯವ್ಯಯ ನೀಡಿದಲ್ಲದೆ ತಲಾ 1,500 ಕೋಟಿ ರು. ಉತ್ತದ ಮೈಕ್ರೋ ಮತ್ತು ಮ್ಯಾಕ್ರೋ ನಿಧಿಯ ಕಾಮಗಾರಿಗಳಿಗೆ ಈಗಾಗಲೆ ಅನುಮೋದನೆ ನೀಡಿ, ಭೌತಿಕವ ಮರಿಗಳು ಆರಂಭಿಸಲಾಗಿದೆ ಎಂದರು.
ಖರ್ಗೆ ನೆನಪಿಸಿಕೊಂಡ ಸಿಎಂ: ಕಲ್ಯಾಣದ ಪ್ರತಿ ಮನೆಯೂ ಕಲ್ಯಾಣ ಮಾಡುವುದು ನಮ್ಮ ಯೋಜನೆಯಿದೆ. ಆ ನಿಟ್ಟಿನಲ್ಲಿ 371 ಜೆ ಕಲಂ ಜಾರಿಗೆ ತರಲು ಮೊದಲು ಹೆಜ್ಜೆ ಇಟ್ಟವರು ದಿ. ವೈಜನಾಥ ಪಾಟೀಲ. ಅದನ್ನು ರಾಜತಾಂತ್ರಿಕವಾಗಿ ಬಡಿದಾಡಿ ಜಾರಿಗೆ ತಂದವರು ಮಲ್ಲಿಕಾರ್ಜುನ ಖರ್ಗೆ. ಯಾರು ಕೆಲಸ ಮಾಡಿದ್ದಾರೆ ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು.