Advertisement

ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ: ಸಿಎಂ

04:14 PM Sep 15, 2022 | Team Udayavani |

ಬೆಂಗಳೂರು: ಕರ್ನಾಟಕ ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ (ಉತ್ಪಾದನಾ ಆಧಾರಿತ ಪ್ರೋತ್ಸಾಹಕ)ಗಳನ್ನು ನೀಡುತ್ತಿರುವ ಮೊದಲ ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಲಘು ಉದ್ಯೋಗ ಭಾರತ, ಕರ್ನಾಟಕ ಇವರ ವತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ-2022 ನ್ನು ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯನ್ನು ಸರ್ಕಾರ ಮನಗಂಡಿದೆ. ಸರ್ಕಾರ ಕೈಗಾರಿಕಾ ಸ್ನೇಹಿಯಾದ ನೀತಿಗಳು, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿ ಪಾಲಿಸಿ, ಮುಂದಿನ ಐದು ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಚೆನ್ನೈ ಬಾಂಬೆ ಕಾರಿಡಾರ್ ನಲ್ಲಿ ಕೈಗಾರಿಕಾ ಟೌನ್, ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿಗಳಲ್ಲಿ ಕೈಗಾರಿಕಾ ಅಭಿವೃದ್ಧಿ. ಗುಲ್ಬರ್ಗಾ, ಯಾದಗಿರಿ, ಮೈಸೂರುಗಳಲ್ಲಿ ಕೈಗಾರಿಕಾ ಪಾರ್ಕ್‍ಗಳ ಸ್ಥಾಪನೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಆಗುತ್ತಿದೆ. 400 ಅಂತರರಾಷ್ಟ್ರೀಯ ಮಟ್ಟದ ಆರ್‍ಎಂಡ್‍ಡಿ ಕೇಂದ್ರಗಳಿವೆ. 400 ಫಾರ್ಚುನ್ ಕಂಪನಿಗಳು ಬೆಂಗಳೂರಿನಲ್ಲಿವೆ. ಇಲ್ಲಿನ ಎಕೋಸಿಸ್ಟಂ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ಸಂಶೋಧನಾ ನೀತಿಯಿದ್ದು, ಯಾವುದೇ ಸಂಶೋಧನಾ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತದೆ.  ವಿಜ್ಞಾನವನ್ನು ಸಾಮಾನ್ಯ ನಾಗರಿಕನೂ ಬಳಸುವಂತಾಗ ಮಾತ್ರ ವಿಜ್ಞಾನದ ಮಹತ್ವ ಹೆಚ್ಚುತ್ತದೆ. ಸೆಮಿಕಂಡಕ್ಟರ್ ನೀತಿ, ಆರ್ ಎಂಡ್ ಡಿ ನೀತಿ, ಉದ್ಯೋಗ ನೀತಿಗಳು ರಾಜ್ಯದಲ್ಲಿದೆ. ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ದೇಶವೊಂದು ಮುನ್ನಡೆಯಲು ತನ್ನ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಸ್ವಾವಲಂಬನೆಯ ದೇಶ ಸ್ವಾಭಿಮಾನಿ ದೇಶ. ಸ್ವಾತಂತ್ರ್ಯ ಬಂದಾಗ ಎಲ್ಲರಿಗೂ ಆಹಾರ ಕೊಡುವ ಸ್ಥಿತಿ ಇರಲಿಲ್ಲ. ಆದರೆ ಈಗ 130 ಕೋಟಿ ಜನಸಂಖ್ಯೆಗೂ ಆಹಾರ ಉತ್ಪಾದಿಸಿ ಸ್ವಾಭಿಮಾನಿ ದೇಶವಾಗಿ ಹೊರಹೊಮ್ಮಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಘೋಷಿಸಿ ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಲಘು ಉದ್ಯೋಗಕ್ಕೆ ಸಹಾಯ ಮಾಡುವ ಮುದ್ರಾ ಯೋಜನೆಯನ್ನು ಜಾರಿಗೊಳಿಸಿದರು. ಎಂ.ಎಸ್. ಎಂ.ಇ ಗಳಿಗೆ ವಿಶೇಷ ಒತ್ತು ನೀಡಿ ಆತ್ಮನಿರ್ಭರ್ ಭಾರತ್ ಕಾರ್ಯಕ್ರಮ ಜೋಡಿಸಿದ್ದಾರೆ. ಆತ್ಮನಿರ್ಭರ್ ಅಂದರೆ ಸ್ವಾವಲಂಬನೆ. ಅದನ್ನು ಸಾಧಿಸಲು ಬೃಹತ್ ಮತ್ತು ಸಣ್ಣ ಉದ್ಯಮಗಳ ನಡುವೆ ಸಂಬಂಧವನ್ನು ಬೆಳೆಸಿ, ಬೃಹತ್ ಉದ್ಯಮಗಳಿಗೆ ಅಗತ್ಯವಿರುವುದೆಲ್ಲವೂ ಇದೇ ದೇಶದಲ್ಲಿ ತಯಾರಾಗಬೇಕು. ವಿದೇಶದಿಂದ ಯಾವುದೇ ವಸ್ತು ಆಮದು ಆಗಬಾರದೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದರು. ಹಿಂದೆ ರಕ್ಷಣಾ ಕ್ಷೇತ್ರದಲ್ಲಿ ಶೇ 90 ರಷ್ಟು ಸಾಮಾಗ್ರಿಗಳು ವಿದೇಶಗಳಿಂದ ಬರುತ್ತಿತ್ತು. ಕೇವಲ 7 ವರ್ಷಗಳ ನರೇಂದ್ರ ಮೋದಿಯವರ ಆಡಳಿತದ ಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಶೇ. 60 ರಷ್ಟು ರಕ್ಷಣಾ ಸಾಮಾಗ್ರಿಗಳು ಭಾರತದಲ್ಲಿಯೇ, ಭಾರತೀಯರಿಂದ ಉತ್ಪಾದನೆಯಾಗುತ್ತಿದೆ. ದೊಡ್ಡಮಟ್ಟದ ಆರ್.ಅಂಡ್ ಡಿ ಅಗತ್ಯವಿದೆ. ಉತ್ಪಾದನೆಯು ಹಲವಾರು ಪರೀಕ್ಷೆಗಳಿಗೆ ಒಳಪಡಬೇಕು. ಅತಿ ಶೀಘ್ರ ದಲ್ಲಿಯೇ ಶೇ 90 ರಷ್ಟು ಉತ್ಪಾದನೆ ಆಗಲಿದ್ದು, ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡಲಾಗುವುದು ಎಂದರು.

ಬದಲಾವಣೆಯ ಯುಗ: ಆಮದು ಮಾಡಿಕೊಳ್ಳುವ ದೇಶದಿಂದ ರಪ್ತು ಮಾಡುವ ದೇಶವಾಗಿ ಬದಲಾಗಿದ್ದೇವೆ. ಈ ಬದಲಾವಣೆ ನಮ್ಮ, ಚಿಂತನೆ, ದೂರದೃಷ್ಟಿ, ಅನುಷ್ಠಾನದಿಂದ ಪ್ರಾರಂಭವಾಗುತ್ತದೆ. ಇದು ಭಾರತದ ಸಾಮರ್ಥ್ಯವನ್ನು ಬಿಂಬಿಸುತ್ತದೆ ಎಂದರು. ಬದಲಾವಣೆಯ ಯುಗದಲ್ಲಿ ನಾವಿದ್ದೇವೆ. ಕೈಗಾರಿಕೆಗಳನ್ನು ಸ್ಥಾಪಿಸಿರುವವರು, ಅದನ್ನು ವಿಸ್ತರಿಸಬಯಸುವವರಿಗೆ ಇದು ಸಕಾಲ. ದೇಶದ ಬದಲಾವಣೆಯಲ್ಲಿ ಭಾಗಿಯಾಗಲು ಅವಕಾಶವಿದೆ. ದೇಶದ ಬದಲಾವಣೆ ದಿಕ್ಕು ಊರ್ಧ್ವಮುಖಿಯಾಗಿದೆ.  ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

Advertisement

ಲಘು ಉದ್ಯೋಗ ಭಾರತಿಯ ಮೂಲಕ ಸರ್ಕಾರ ಹಾಗೂ ಲಘು ಉದ್ಯೋಗದಾರರನ್ನು ಸಂಯೋಜಿಸುವ ವೇದಿಕೆಯಾಗಿದೆ.  ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸದಾ ಮುನ್ನಡೆಯಬೇಕು. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಸೂಕ್ತ ಸ್ಥಳವಾಗಿದ್ದು, ಸಣ್ಣ ಕೈಗಾರಿಕೆಗಳು, ಲಘು ಉದ್ಯೋಗಿಗಳು ರಾಜ್ಯದ ಅಭಿವೃಧ್ಧಿಗೆ ಕೊಡುಗೆ ನೀಡಿವೆ. ನವಕರ್ನಾಟಕದಿಂದ ನವಭಾರತವನ್ನು ನಿರ್ಮಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next