Advertisement

ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ ಬಸವರಾಜ ಬೊಮ್ಮಾಯಿ

04:47 PM Nov 28, 2021 | Team Udayavani |

ಬೆಂಗಳೂರು: ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜ್ಯದಿಂದ ಬರುವವರಲ್ಲಿ ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇರಳದಿಂದ ಬಂದಿರುವ ಅರೆವೈದ್ಯಕೀಯ ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಆರ್ ಟಿಸಿಪಿಆರ್ ಪರೀಕ್ಷೆ ನಡೆಸಿ ನೆಗಟಿವ್ ರಿಪೋರ್ಟ್ ಬಂದರೆ ಮಾತ್ರ ರಾಜ್ಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಕೇರಳ ರಾಜ್ಯದಿಂದ ಬರುವವರು ಎರಡೂ ಡೋಸನ್ನು ಪಡೆದಿರಬೇಕು. ಆರ್ ಟಿ ಸಿಪಿಅರ್ ಪರೀಕ್ಷೆಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸೌತ್ ಆಫ್ರಿಕಾ, ಹಾಂಕಾಂಗ್, ಬೊಟ್ಸ್ವಾನಾ ದೇಶಗಳಲ್ಲಿ ಕೋವಿಡ್ ನ ಹೊಸ ಪ್ರಬೇಧ ಕಾಣಿಸಿಕೊಂಡಿದೆ. ಈ ಮೂರು ದೇಶಗಳಲ್ಲಿ ಹರಡುತ್ತಿರುವ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಧಾನಿಯವರು ಕೋವಿಡ್ ರೂಪಾಂತರಿ ನಿಯಂತ್ರಣಕ್ಕೆ ಹಲವಾರು ನಿರ್ದೇಶನಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಹೊಸ ಪ್ರಬೇಧದ ಸೋಂಕಿನ ಪ್ರಕರಣ ಕಂಡುಬಂದಿಲ್ಲ. ಧಾರವಾಡ, ಮೈಸೂರು, ಬೆಂಗಳೂರಿನ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಹಾಸ್ಟೆಲ್ ಗಳನ್ನು ಕಂಟೈನ್ಮೆಂಟ್ ಮಾಡಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಸ್ ಡಿ ಎಂ ಕಾಲೇಜನ ವೈದ್ಯರು, ನರ್ಸ್ ಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಹೊರರೋಗಿಗಳನ್ನು ನಿರ್ಬಂಧಿಸಲಾಗಿದೆ. ಮೈಸೂರಿನಲ್ಲಿಯೂ ಸೋಂಕು ಕಾಣಿಸಿಕೊಂಡಿರುವ ಜಾಗಗಳನ್ನು ಕಂಟೇನ್ಮೆಂಟ್ ಮಾಡಿ ತೀವ್ರ ನಿಗಾ ವಹಿಸಲಾಗಿದೆ. ಕೋವಿಡ್ ಪರೀಕ್ಷೆ ಮಾತ್ರವಲ್ಲದೇ ಚಿಕಿತ್ಸೆಯನ್ನು ನೀಡಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ನ ಹೊಸ ಪ್ರಬೇಧದ ಸಂಪರ್ಕಕ್ಕೆ ಬಂದಿರುವ ದೇಶದಿಂದ ವಿಮಾನಗಳ ಮೂಲಕ ಆಗಮಿಸುವ ಜನರನ್ನು ತಪಾಸಣೆಗೆ ಒಳಪಡಿಸಿ ನೆಗಟಿವ್ ರಿಪೋರ್ಟ್ ಬಂದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡುವುದು. ಇಲ್ಲವಾದಲ್ಲಿ ಕಂಟೈನ್ ಮೆಂಟ್ ಸ್ಥಳಕ್ಕೆ ಸ್ಥಳಾಂತರಿಸುವುದು. ವಿಶೇಷವಾಗಿ ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಮೂರು ದೇಶಗಳಿಂದ ನಗರಕ್ಕೆ ಪ್ರಯಾಣಿಕರ ಆಗಮನವನ್ನು ಸಂಪೂರ್ಣವಾಗಿ ನಿಷೇದಿಸಬೇಕೆನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನ್ನು ನೀಡಲು ಕೇಂದ್ರದ ಅನುಮತಿಗೆ ಪತ್ರ ಬರೆಯಲಾಗಿದೆ. ಮಾಲ್, ಸಾರ್ವಜನಿಕ ಸ್ಥಳಗಳು,ಕಚೇರಿಗಳಲ್ಲಿ ಎಲ್ಲರಿಗೂ ಎರಡೂ ಡೋಸ್ ಆಗಿರಲೇಬೇಕು. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವವರೂ ಕೂಡ ಎರಡು ಡೋಸ್ ಪಡೆದಿರಬೇಕು. ಮಾಲ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement

ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಎಚ್ಚರಿಕೆ ನೀಡುವ ಬಗ್ಗೆ ಉತ್ತರ ನೀಡುತ್ತಾ, ಗಡಿಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸುವುದು, 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್ ಟಿ ಸಿಪಿಆರ್ ಪರೀಕ್ಷೆ ಮಾಡಿಸುವುದು ಹಾಗೂ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್ ಟಿಸಿಪಿಆರ್ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹೊಸ ವರ್ಷದ ಆಚರಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಗೆ ಸಾರ್ವಜನಿಕ ಪ್ರಚಾರದ ಕುರಿತು ಪ್ರತಿಕ್ರಯಿಸಿ, ಪ್ರಚಾರ ಸಭೆಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 80 ಲಕ್ಷ ಲಸಿಕೆ ಲಭ್ಯವಿದ್ದು, ಈಗಾಗಲೆ ಮೊದಲನೇ ಡೋಸ್ 91 ಲಕ್ಷವಾಗಿದೆ. ಡಿಸೆಂಬರ್ ಅಂತ್ಯದೊಳಗೆ 70% ರಷ್ಟು ಎರಡನೇ ಡೋಸ್ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next