ಬೆಂಗಳೂರು: ಕಾಂಗ್ರೆಸ್ ನವರು ತೆವಲಿಗಾಗಿ ರಾಷ್ಟ್ರ ಧ್ವಜವನ್ನು ಬಳಸಿ ಕೊಂಡಿದ್ದಾರೆ. ಜನರು ಇದೆಲ್ಲವನ್ನು ನೋಡುತ್ತಿದ್ದಾರೆ. ಸದನದಲ್ಲಿ ಅವರು ನಡೆದುಕೊಳ್ಳುವ ರೀತಿ ಶೋಭೆ ತರುವುದಿಲ್ಲ. ಇಂತಹ ನಿಲುವಿನಿಂದಲೇ ಕಾಂಗ್ರೆಸ್ ಇಂದು ನೆಲೆಕಚ್ಚಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರ ರಾಷ್ಟ್ರಧ್ವಜ ಹೇಳಿಕೆಯ ವಿರುದ್ಧ ಸದನದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ನವರು ಬಹಳ ಹತಾಶರಾಗಿದ್ದಾರೆ. ರಾಜಕೀಯವಾಗಿ ದಿವಾಳಿಯಾಗಿದ್ದಾರೆ. ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ಮಾಡಬಹುದಿತ್ತು ಎಂದರು.
ಇದನ್ನೂ ಓದಿ:ಹಿಜಾಬ್ ವಿವಾದ ಬಿಜೆಪಿ ಪ್ರಾಯೋಜಿತ,ಕಾಂಗ್ರೆಸ್ ದ್ವಂದ್ವ ನಿಲುವು:ಎಸ್ ಡಿಪಿಐ ಆಕ್ರೋಶ
ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಆದರೆ ಕಾಂಗ್ರೆಸ್ ನವರು ಈಶ್ವರಪ್ಪನವರ ಮಾತಿನ ಆಯ್ದ ಭಾಗಗಳನ್ನ ಆರಿಸಿಕೊಂಡು ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯಿಂದ ಕಾನೂನು ಉಲ್ಲಂಘನೆಯಾಗಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
ಈಶ್ವರಪ್ಪ ಹೇಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಉತ್ತರ ಕೂಡ ಕೊಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.