ದಾವಣಗೆರೆ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ 77 ವರ್ಷದ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಯೋಮಿತಿ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಬದಲಿಸಿದೆ ಎಂಬ ಸುಳಿವು ನೀಡಿದ್ದಾರೆ.
ಶನಿವಾರ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ನಡೆದ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ರವೀಂದ್ರನಾಥ್ ಮುತ್ಸದ್ಧಿ ರಾಜಕಾರಣಿ. ಅವರು ನಿವೃತ್ತಿ ಹೊಂದುವ (ನೋ ರಿಟೈರ್ಡ್, ನೋ ಟೈರ್ಡ್) ಪ್ರಶ್ನೆಯೇ ಇಲ್ಲ. ಅವರಂಥ ಹಿರಿಯರು ರಾಜಕಾರಣದಲ್ಲಿ ಸದಾ ಇರಬೇಕು. ಕ್ಷೇತ್ರದ ಜನರು ಬೆಂಬಲಿಸಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಆಕಾಂಕ್ಷಿಗಳಲ್ಲಿ ಆತಂಕ
ಹಾಲಿ ಶಾಸಕ ರವೀಂದ್ರನಾಥ್‌ಗೆ ಈಗ 77 ವರ್ಷ. ಬಿಜೆಪಿಯ ಹಾಲಿ ನಿಯಮಾನುಸಾರ (75 ವರ್ಷ ಮೀರಿದವರಿಗೆ ಸ್ಪರ್ಧೆಗೆ ಅವಕಾಶವಿಲ್ಲ) ಮುಂದಿನ ಚುನಾವಣೆಯವಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ವ್ಯಾಪಕವಾಗಿತ್ತು. ಆದ್ದರಿಂದಲೇ ಇಲ್ಲಿ ಹಲವು ಆಕಾಂಕ್ಷಿಗಳಿದ್ದರು. ಈಗ ಮುಖ್ಯಮಂತ್ರಿಯ ಹೊಸ ಘೋಷಣೆಯಿಂದ ಆಕಾಂಕ್ಷಿಗಳಲ್ಲಿ ಆತಂಕ ಮೂಡುವಂತಾಗಿದೆ.