Advertisement

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಬೊಮ್ಮಾಯಿ

02:38 PM Nov 22, 2022 | Team Udayavani |

ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗೀನ ಅರ್ಪಿಸಿದರು.

Advertisement

ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಾಗೀನ ಅರ್ಪಣೆ ಮಾಡಿದರು.

ಜಲಾಶಯದ ಮೇಲೆ ರೆಡ್ ಕಾರ್ಪೆಟ್ ಹಾಕಿ ವಿವಿಧ ಪುಷ್ಪಗಳಿಂದ ಜಲಾಶಯವನ್ನು ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸಣ್ಣ ಮಳೆಯಾದ ಪರಿಣಾಮ ಇಡೀ ಜಲಾಶಯದ ವಾತಾವರಣ ಆಹ್ಲಾದಕರವಾಗಿತ್ತು. ಮುಖ್ಯಮಂತ್ರಿಗಳು ಜಲಾಶಯದ ಅಣೆಕಟ್ಟೆ ಮೇಲಿಂದ ಬಾಗೀನ ಅರ್ಪಿಸಿದರು. ಪುಷ್ಪಾರ್ಚನೆ ಮಾಡಿ, ಹಾಲು ತುಪ್ಪ ಸುರಿದು ಗಂಗೆಗೆ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಜಲಾಶಯ ಭವ್ಯವಾಗಿದ್ದು, ಮಧ್ಯ ಕರ್ನಾಟಕದ ಜನರಿಗೆ ಉಪಯುಕ್ತವಾಗಿದೆ. 89 ವರ್ಷಗಳ ಬಳಿಕ ಭರ್ತಿಯಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಬಾಗೀನ ಅರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದ್ದು ಐತಿಹಾಸಿಕ ಕ್ಷಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು.

ಮಧ್ಯ ಕರ್ನಾಟಕದ ಈ ಜಲಾಶಯ ಭರ್ತಿ ಆಗಿರುವುದರಿಂದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ. ಪಶ್ಚಿಮ ಘಟ್ಟಗಳಿಂದ ಬರುವ ಜಲವನ್ನು ಸಂಗ್ರಹಿಸುವ ಉದ್ದೇಶದಿಂದ ಮಹಾರಾಜರು ಈ ಜಲಾಶಯ ನಿರ್ಮಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಜಲಾಶಯ ನಿರ್ಮಾಣಕ್ಕಾಗಿ ಮನೆತನದ ಒಡವೆ ಮಾರಾಟ ಮಾಡಿ ಹಣ ಒದಗಿಸಿದ ಮಹಾರಾಜರ ಕಾಳಜಿಗೆ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

Advertisement

ಈ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುವ ವ್ಯವಸ್ಥೆ ಮಾಡುತ್ತೇವೆ. ಜಲಾಶಯದ ಕೆಳಬಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಬರದ ನಾಡು ಎಂಬ ಹಣೆಪಟ್ಟಿಯನ್ನು ಅಳಿಸಲಾಗುವುದು. ಸಂಪದ್ಭರಿತ ಕರ್ನಾಟಕವಾಗಿ ರೂಪಿಸಲು ಸಂಕಲ್ಪ ಮಾಡಿದ್ದೇವೆ ಎಂದರು.

ಇದನ್ನೂ ಓದಿ:ಪಾಕ್ ಪ್ರವಾಸದಲ್ಲಿ ಊಟದ್ದೇ ಚಿಂತೆ!: ಬಾಣಸಿಗರನ್ನು ಕರೆದೊಯ್ಯಲಿದೆ ಇಂಗ್ಲೆಂಡ್ ಟೆಸ್ಟ್ ತಂಡ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹೂಡಿಕೆ ಮಂಡಳಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಲಿದೆ. ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ 16 ಸಾವಿರ ಕೋಟಿ ರೂ ಅನುದಾನ ಸಿಗಲಿದೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಎಸ್.ನವೀನ್, ವೈ.ಎ.ನಾರಾಯಣಸ್ವಾಮಿ ಇದ್ದರು. ಶಾಸಕ ಗೂಳಿಹಟ್ಟಿ ಶೇಖರ್ ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next