ಬೆಂಗಳೂರು: ಮಹಿಳಾ ಆಯೋಗದಿಂದ ಸ್ವೀಕಾರವಾದ ದೂರುಗಳನ್ನು ಏಳರಿಂದ ಎಂಟು ಗಂಟೆಗಳೊಳಗೆ ನೋಂದಣಿಯಾಗಿ ತನಿಖೆ ಪ್ರಾರಂಭಿಸಬೇಕೆಂದು ಡಿಜಿ ಅವರಿಗೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ ಮಾಡಲಾಗುವುದು. ನಿರ್ಭಯ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಬಗ್ಗೆ ಪುರುಷರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು ಎಂದರು.
ಮಹಿಳಾ ಆಯೋಗಕ್ಕೆ ಬಲ: ಮಹಿಳಾ ಆಯೋಗಕ್ಕೆ ಇನ್ನಷ್ಟು ಅಧಿಕಾರದ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲು ಸಿದ್ದವಿದೆ ಎಂದರು.
ಕಲ್ಯಾಣ ಕಾರ್ಯಕ್ರಮಗಳು: ಇದಲ್ಲದೆ ಕಲ್ಯಾಣ ಕೆಲಸಗಳನ್ನು ಸರ್ಕಾರ ಕೈಗೊಂಡಿದೆ. ಮಹಿಳೆಯರ ಪೌಷ್ಟಿಕತೆ ಹೆಚ್ಚಿಸಲು ಕ್ರಮ ವಹಿಸಿದೆ. ಕೆಲಸ ಮಾಡುವ ಗರ್ಭಿಣಿಯರಿಗೆ ವಿಶೇಷ ಸ್ಥಳ ನಿಗದಿ, 5 ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರಿಗೆ ಹಾಸ್ಟೆಲ್, ಐಐಎಂ ತರಬೇತಿ, ಎಲಿವೆಟ್ ಯೋಜನೆಯಡಿ ಸ್ಟಾರ್ಟ್ ಅಪ್ ಗೆ ಅವಕಾಶ, ಸ್ತ್ರೀ ಶಕ್ತಿ ಸಂಘಗಳಿಗೆ ಸ್ರ್ತೀ ಸಾಮಾರ್ಥ್ಯ ಯೋಜನೆ ಜಾರಿಗೆ ತಂದಿದ್ದೇವೆ. ಐದು ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ. 7500 ಸ್ತ್ರೀ ಶಕ್ತಿ ಸಂಘಗಳಿವೆ ಅಮೃತ ಯೋಜನೆಯಡಿ ಒಂದು ಲಕ್ಷ ರೂ ನೀಡಿ ಸ್ವಯಂ ಉದ್ಯೋಗ ನೀಡಲಾಗಿದೆ.
ಮಹಿಳೆಯರಿಗೆ ವಿಶೇಷ ಕ್ಲಾಸ್ ರೂಮು, ನಿರ್ಮಾಣ, ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಮಾಡುವವರ ಗೌರವಧನ ಹೆಚ್ಚಳ ಮಾಡಿದ್ದೇವೆ .ಎನ್.ಪಿ.ಎಸ್ ಯೋಜನೆ ಮರುಪ್ರಾರಂಭವಾಗಿದೆ. ಈ ವರ್ಷ 4000 ಹೊಸ ಅಂಗನವಾಡಿ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಎಲ್ಲಾ ಹಂತದ ನೆರವು ಒದಗಿಸಲಾಗುತ್ತಿದೆ. ಮಹಿಳೆಯರು ಸಬಲರಾದರೆ ದೇಶ ಸಬಲವಾಗುತ್ತದೆ ಎಂದರು.
ನಿರ್ಭಯ ಅಡಿ ಬೆಂಗಳೂರಿನಲ್ಲಿ 7500 ಕೃತಕ ಬುದ್ಧಿಮತ್ತೆಯ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯಾರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು ರಕ್ಷಿಸಲು ಸಂಚರಿಸುತ್ತವೆ. ಅಲ್ಪಾವಧಿ ಸ್ವಯಂ ರಕ್ಷಣಾ ತರಬೇತಿಯನ್ನು ಶಾಲಾ ಕಾಲೇಜುಗಳ ಹಾಸ್ಟೆಲ್ ಗಳಲ್ಲಿ ನೀಡಲಾಗುತ್ತಿದೆ ಎಂದರು.