ಬೆಂಗಳೂರು: ರಾಜ್ಯಾದ್ಯಂತ ಚಿರತೆ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳ ಜತೆಗೆ ತುರ್ತು ಸಭೆ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಿರತೆ ಟಾಸ್ಕ್ ಫೋರ್ಸ್ ರಚಿಸಲು ಸೂಚಿಸಿದ್ದಾರೆ.
ತಿ. ನರಸೀಪುರ ತಾಲೂಕಿನಲ್ಲಿ ಸಂಭವಿಸಿದ ಚಿರತೆ ದಾಳಿ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಈ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರಸ್ತುತ ಚಿರತೆ ಸೆರೆ ಹಿಡಿಯಲು 158 ಮಂದಿ ಕೆಲಸ ಮಾಡುತ್ತಿದ್ದಾರೆ. ಕೂಂಬಿಂಗ್ ಆಪರೇಷನ್ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಕರಣ ಸಂಭವಿಸಿದ 3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಸೂಚಿಸಿದರು. ಚಿರತೆ ದಾಳಿಯಿಂದಾಗಿ ತಿ. ನರಸೀಪುರ ತಾಲೂಕಿನ 21 ಹಳ್ಳಿಗಳು ಬಾಧಿತವಾಗಿದೆ. ಈ ಹಳ್ಳಿಗಳಲ್ಲಿ ಚಿರತೆ ಸೆರೆ ಹಿಡಿಯಲು ಸ್ಥಳೀಯರ ನೆರವು ಪಡೆಯುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ , ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ.ಎಸ್. ಶ್ರೀಕರ, ಮೈಸೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.