Advertisement

ಸಿಎಂ ದೆಹಲಿ ಭೇಟಿ: ಮತ್ತೆ ಖಾತೆ ಬದಲಾವಣೆ ಗುಲ್ಲು

09:28 PM Jul 24, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು, ರಾಜ್ಯ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಹಾಗೂ ಕೆಲವು ಸಚಿವರ ಖಾತೆಗಳ ಬದಲಾವಣೆ ಮಾಡುವ ಕುರಿತು ಪಕ್ಷದ ಹೈಕಮಾಂಡ್‌ ಜೊತೆ ಚರ್ಚಿಸುವ ಸಾಧ್ಯತೆ ಇದೆ.

Advertisement

ಸಚಿವ ಸಂಪುಟದಲ್ಲಿ ಐದು ಸಚಿವ ಸ್ಥಾನಗಳು ಖಾಲಿ ಇದ್ದು, ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪ ವಿರುದ್ಧ ಕೇಳಿ ಬಂದಿದ್ದ ಆರೋಪದಿಂದ ಅವರು ಮುಕ್ತರಾಗಿದ್ದರಿಂದ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ. ಅದೇ ರೀತಿ ರಮೇಶ್‌ ಜಾರಕಿಹೊಳಿ ಅವರೂ ಆರೋಪಮುಕ್ತರಾಗಿರುವ ಕಾರಣ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಆಗ್ರಹ ಇರುವುದರಿಂದ ಸಿಎಂ ಬೊಮ್ಮಾಯಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಒಂದು ವೇಳೆ, ಸಂಪುಟ ವಿಸ್ತರಣೆಗೆ ಅವಕಾಶ ಕಲ್ಪಿಸಿದರೆ, ಖಾಲಿ ಇರುವ ಐದು ಸ್ಥಾನಗಳಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಖಾತೆ ಬದಲಾವಣೆ ಗುಮ್ಮ:

ಹಾಲಿ ಸಂಪುಟದಲ್ಲಿ ಕೆಲವು ಸಚಿವರುಗಳ ಕಾರ್ಯವೈಖರಿ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಅಸಮಾಧಾನವಿದೆ ಎನ್ನಲಾಗಿದೆ. ಅಂತಹ ಸಚಿವರ ಖಾತೆಗಳನ್ನು ಬದಲಾಯಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಒಂದು ವೇಳೆ, ಸಂಪುಟ ವಿಸ್ತರಣೆಯಾದರೆ ಆ ಸಂದರ್ಭದಲ್ಲಿಯೇ ಖಾತೆಗಳ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇಲ್ಲದಿದ್ದರೆ, ಸರ್ಕಾರದ ವರ್ಷಾಚರಣೆ ಕಾರ್ಯಕ್ರಮ ಮುಗಿದ ನಂತರ ತೀರ್ಮಾನ ಕೈಗೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಈಗಲೂ ಅದೇ ಉತ್ತರ, ಹೈಕಮಾಂಡ್‌ ಯಾವ ಸೂಚನೆ ನೀಡುತ್ತದೆಯೋ ಅದನ್ನು ಪಾಲಿಸಲಾಗುವುದು ಎಂದಿದ್ದಾರೆ.

ರಾಜ್ಯಗಳ ಯಶಸ್ವಿ ಯೋಜನೆಗಳ ಕುರಿತು ಚರ್ಚೆ:

ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ರಾಜ್ಯಗಳಲ್ಲಿ ಯಶಸ್ವಿಯಾಗಿರುವ ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಗಳಿಗೆ ನೀಡಿರುವ ಕೇಂದ್ರದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ರಾಜ್ಯದ ಐಟಿಐ, ಕಿಸಾನ್‌ ಸಮ್ಮಾನ್‌ ಯೋಜನೆ, ನೂತನ ಶಿಕ್ಷಣ ನೀತಿ ಜಾರಿಗೆ ತಂದಿರುವ ಬಗ್ಗೆ ಚರ್ಚೆ ನಡೆಸಲಾಗಿದೆ.  ಪ್ರಧಾನ ಮಂತ್ರಿ ಎಲ್ಲರಿಗೂ ಸಲಹೆಗಳನ್ನು ನೀಡಿದ್ದಾರೆ. ಮುಂದಿನ ಅಕ್ಟೋಬರ್‌ನಲ್ಲಿ ಮತ್ತೆ ಸಭೆ ಸೇರಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ. ನಾಳೆ ರಾಷ್ಟ್ರಪತಿಗಳ ಪ್ರಮಾಣ ವಚನ ಕಾರ್ಯಕ್ರಮವಿದೆ. ನಂತರ ಕ್ರೀಡಾ ಸಚಿವರು, ಪಿಯೂಷ್‌ ಗೋಯಲ್‌ ಹಾಗೂ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಸಂಬಂಧಪಟ್ಟ ಇಲಾಖೆಗಳ ಕುರಿತು ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next