Advertisement

ಫೆ. 17ರಂದು ಸಿಎಂ ಬೊಮ್ಮಾಯಿ ಬಚಾವೋ ಬಜೆಟ್‌: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

10:57 PM Feb 02, 2023 | Team Udayavani |

ಕಲಬುರಗಿ: ರಾಜ್ಯದಲ್ಲಿ ಫೆ.17ರಂದು ಮಂಡನೆಯಾಗಲಿರುವುದು ಜನಸಾಮಾನ್ಯರ ಬದುಕು ಭದ್ರ ಮಾಡುವ ಬಜೆಟ್‌ ಅಲ್ಲ. ಅದು ಬಸವರಾಜ ಬೊಮ್ಮಾಯಿ ಬಚಾವೋ ಬಜೆಟ್‌ ಆಗಿರಲಿದೆ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಕೇಂದ್ರ ಸರಕಾರದ ಬಜೆಟ್‌ ಮಾದರಿ ನೋಡಲಾಗಿದೆ. ಅದೊಂದು ಕೇವಲ ಮೋಡಿ ಮಾಡುವ ಮೋದಿ ರಂಜಿತ ಬಜೆಟ್‌ ಆಗಿದೆ. ಜನ ಸಾಮಾನ್ಯರಿಗೆ, ರೈತಾಪಿ ವರ್ಗಕ್ಕೆ ಯಾವುದೇ ಸೌಕರ್ಯಗಳನ್ನು ಕೊಡುವಲ್ಲಿ ಯಶ ಕಂಡಿಲ್ಲ. ಇದೊಂದು ದೂರದ ಗುಡ್ಡ ನುಣ್ಣಗೆ ಎಂಬಂತೆ ಕಂಡಂತಹ ಬಜೆಟ್‌ ಆಗಿದೆ ಎಂದರು.

ಶಾ-ಮೋದಿ ಆಟ ನಡೆಯಲ್ಲ
ರಾಜ್ಯಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಯಾರೇ ಬರಲಿ ಅವರ ಆಟ ನಡೆಯುವುದಿಲ್ಲ ಎಂದ ಅವರು, ವಿಜಯ ಸಂಕಲ್ಪ ಯಾತ್ರೆ ಕೇವಲ ಸಂಕಲ್ಪವಾಗಿಯೇ ಉಳಿಯುತ್ತದೆ. ಅದು ನಿಜವಾಗದು. ನಿಮ್ಮ ಕನಸು ನನಸಾಗದು. ಡಬಲ್‌ ಎಂಜಿನ್‌ ಸರಕಾರ ಮಾಡುವ ಮಹಾ ಮೋಸದ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಂಡಿದ್ದಾರೆ ಎಂದರು. ಮುಂಬರುವ ದಿನಗಳಲ್ಲಿ ಈ ಬಂಡಲ್‌ ಜನತಾ ಸರಕಾರಕ್ಕೆ ತಕ್ಕ ಉತ್ತರ ಕೊಟ್ಟು ಮನೆಗೆ ಕಳುಹಿಸುವ ಅಭಿಯಾನವನ್ನು ಜನ ಆರಂಭಿಸಿದ್ದಾರೆ. ಜನ ಬೇಸತ್ತಿದ್ದಾರೆ. ಶೇ.40 ಕಮಿಷನ್‌, ಸುಳ್ಳು ಭರವಸೆ, ಆಡಳಿತ ವೈಫಲ್ಯದಿಂದ ಜನ ರೋಸಿ ಹೋಗಿದ್ದಾರೆ ಎಂದರು.

ಕೇಂದ್ರ ಸರಕಾರದ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಲಾಗಿತ್ತು. ಆದರೆ ಬಜೆಟ್‌ನಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. 600ರಲ್ಲಿ ಕೇವಲ 51 ಭರವಸೆಗಳನ್ನಷ್ಟೇ ಈಡೇರಿಸಿದೆ ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next