ಕಲಬುರಗಿ: ಚುನಾವಣೆಗೆ ತಯಾರಿ ಹಾಗೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ. 21 ಹಾಗೂ 22ರಂದು ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿಯಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಏ. 21ರಂದು ಬೆಳಗ್ಗೆ ವಿಮಾನ ಮೂಲಕ ಕಲಬುರಗಿಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಮತ್ತಿತರರ ದಂಡು ಕಲಬುರಗಿಗೆ ಆಗಮಿಸಲಿದ್ದು, ವಿಭಾಗ ಹಾಗೂ ಜಿಲ್ಲಾವಾರು, ವಿಧಾನಸಭಾವಾರು ಸಭೆಗಳನ್ನು ನಡೆಸಲಿದ್ದಾರೆ.
ಪ್ರಮುಖವಾಗಿ ಕಾರ್ಯಕರ್ತರೊಂದಿಗೆ ನೇರವಾಗಿ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಶಾಸಕರ ಕಾರ್ಯವೈಖರಿಯನ್ನು ಪಡೆಯಲಾಗುತ್ತಿದೆ. ಒಟ್ಟಾರೆ ಸಂಘಟನೆ ದೃಷ್ಟಿಯಲ್ಲಿ ಈ ಸಭೆಗಳನ್ನು ಮಹತ್ವ ಹೊಂದಿವೆ ಎನ್ನಲಾಗಿದೆ.
ಬರೀ ಸಭೆಗಳನ್ನು ನಡೆಸಿ ಅಭಿಪ್ರಾಯ ಪಡೆಯುವದಲ್ಲದೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಮುಂದಾಗಿರುವುದು ಪ್ರಮುಖ ಎಂದು ಈಗಾಗಲೇ ಸಂದೇಶ ರವಾನಿಸಲಾಗಿದೆ. ಹೀಗಾಗಿ ಕಾರ್ಯಕರ್ತರು ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಬಹುದೆಂದು ತಿಳಿಯಪಡಿಸಲಾಗಿದೆ.
ಸಿಎಂ ಹಾಗೂ ಕೇಂದ್ರದ ಸಚಿವರು, ರಾಜ್ಯದ ಸಚಿವರು ಹಾಗೂ ಪಕ್ಷದ ಪ್ರಮುಖರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರಣಿ ಸಭೆ ಜತೆಗೆ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ನಡೆಸಲಿರುವ ಬೃಹತ್ ಸಾರ್ವಜನಿಕ ಸಭೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಂಗಳವಾರ ಐವಾನ್ ಶಾಹಿಯಲ್ಲಿ ನಡೆದ ಜಿಲ್ಲೆಯ ಶಾಸಕರು ಹಾಗೂ ಪ್ರಮುಖರ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಏ.16 ಹಾಗೂ 17ರಂದು ಹೊಸಪೇಟೆಯ ಕಾರ್ಯಕಾರಿಣಿಯಲ್ಲಿ ಹಾಗೂ ಏ. 19, 20ರಂದು ಶಿವಮೊಗ್ಗದ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳುವ ಸಿಎಂ ಏ. 21-22ರಂದು ಕಲಬುರಗಿಯಲ್ಲಿದ್ದು, ಸಮಾಲೋಚನೆ ನಡೆಸುವರು.