Advertisement

Karnataka: ರಾಜ್ಯ ಪೊಲೀಸರಿಗೆ ಸಿಎಂ ಭರ್ಜರಿ ಕೊಡುಗೆ

01:58 AM Jan 17, 2024 | Team Udayavani |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಭರ್ಜರಿ ಕೊಡುಗೆ ನೀಡಿದ್ದಾರೆ. ಭವ್ಯವಾದ ಸುಸಜ್ಜಿತ ಪೊಲೀಸ್‌ ಭವನ ನಿರ್ಮಾಣ ಹಾಗೂ ರಾಜ್ಯದ ಪೊಲೀಸ್‌ ಸಿಬಂದಿಗೆ ಬೆಳ್ಳಿ ಪದಕ ವಿತರಣೆಗೆ ತೀರ್ಮಾನಿಸುವ ಮೂಲಕ ರಾಜ್ಯ ಸರಕಾರ ಪೊಲೀಸ್‌ ಇಲಾಖೆಗೆ ಒಂದಷ್ಟು ಪೋತ್ಸಾಹಕ ಕ್ರಮಗಳಿಗೆ ಮುಂದಾಗಿದೆ.
ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕ ಪೊಲೀಸ್‌ ಎಂದು ನಾಮಕರಣಗೊಂಡ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಭವನ ಹಾಗೂ ಬೆಳ್ಳಿ ಪದಕ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕ ಪೊಲೀಸ್‌ ನಾಮಕರಣದ ಸುವರ್ಣ ಮಹೋತ್ಸವದ ಪ್ರಯುಕ್ತ ಪೊಲೀಸ್‌ ಭವನ ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಹಣ ನಿಗದಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು. ಕರ್ನಾಟಕ ಏಕೀಕರಣಕ್ಕೂ ಮುನ್ನ ಮೈಸೂರು ರಾಜ್ಯ ಪೊಲೀಸ್‌ ಎಂದು ಹೆಸರಿತ್ತು. ಏಕೀಕರಣದ ಬಳಿಕ ಕರ್ನಾಟಕ ರಾಜ್ಯ ಪೊಲೀಸ್‌ ಎಂದು ಹೆಸರು ಬದಲಾಯಿತು. ಅದಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್‌ ಅಧಿಕಾರಿ-ಸಿಬಂದಿಗೆ ಬೆಳ್ಳಿ ಪದಕ ನೀಡುವುದಾಗಿಯೂ ಸಿಎಂ ಘೋಷಿಸಿದರು.

ಇದಕ್ಕೆ ಮುನ್ನ ಗೃಹ ಸಚಿವ ಡಾ| ಪರಮೇಶ್ವರ್‌ ಅವರು ಪೊಲೀಸ್‌ ಭವನ ಹಾಗೂ ಬೆಳ್ಳಿ ಪದಕಗಳ ಬಗ್ಗೆ ವಿಷಯ ಪ್ರಸ್ತಾವಿಸಿ ಸಿಎಂ ಗಮನಕ್ಕೆ ತಂದಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಿಎಂ ತಮ್ಮ ಭಾಷಣದಲ್ಲಿ ಈ ಘೋಷಣೆಗಳನ್ನು ಮಾಡಿದರು.

ಎಲ್ಲ ಪೊಲೀಸ್‌ ಅಧಿಕಾರಿ-ಸಿಬಂದಿ ವಾರ್ಷಿಕ ವೈದ್ಯಕೀಯ ತಪಾಸಣ ಭತ್ತೆಯನ್ನು 1 ಸಾವಿರ ರೂ.ಗಳಿಂದ 1,500 ರೂ.ಗೆ ಹೆಚ್ಚಿಸ ಲಾಗುವುದು. 2013ರಲ್ಲಿ ನಮ್ಮ ಸರಕಾರವೇ ಈ ವಾರ್ಷಿಕ ವೈದ್ಯಕೀಯ ತಪಾಸಣ ಭತ್ತೆಯನ್ನು ಹೆಚ್ಚಳ ಮಾಡಿತ್ತು. ಈಗ ಮತ್ತೆ ನಮ್ಮ ಸರಕಾರವೇ ಏರಿಕೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಸರಕಾರ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ ಇದು ದುರ್ಬಳಕೆ ಆಗಬಾರದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next