Advertisement

ಆ್ಯಸಿಡ್ ದಾಳಿಗೊಳಗಾದವರಿಗೆ ನಿವೇಶನ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶ

07:09 PM May 13, 2022 | Team Udayavani |

ಬೆಂಗಳೂರು: ಆ್ಯಸಿಡ್ ದಾಳಿಗೊಳಗಾದ ಎಲ್ಲ ಹೆಣ್ಣು ಮಕ್ಕಳಿಗೆ ನಿವೇಶನ ಹಾಗೂ ಮನೆ ಮನೆ ನೀಡಲು ಆದೇಶವನ್ನು ಹೊರಡಿಸಲಾಗುವುದು ಹಾಗೂ ಅವರಿಗೆ ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

Advertisement

ಅವರು ಇಂದು ಕಂದಾಯ ಇಲಾಖೆಯ ಸಾಮಾಜಿಕ ಭದತ್ರೆ ಮತ್ತು ಪಿಂಚಣೆಗಳ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ‘ಹಲೋ ಕಂದಾಯ ಸಚಿವರೇ – 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಆ್ಯಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವನ್ನು ಉಂಡಿರುತ್ತಾರೆ . ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3000ದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜೊತೆಗೆ ಈಗ ಅವರಿಗೆ ಬದುಕು ಸಾಗಿಸಲು ಮನೆ ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ :  ಆ್ಯಸಿಡ್ ದಾಳಿಕೋರ ನಾಗೇಶ್‌ ಕೊನೆಗೂ ಅರೆಸ್ಟ್: ಸ್ವಾಮೀಜಿಯಂತೆ ವೇಷ ಧರಿಸಿದ್ದ!

ಅಧಿಕಾರ ವಿಕೇಂದ್ರೀಕರಣ

Advertisement

ಆಳುವುದು ಅಂದರೆ ಜನರ ಸಮಸ್ಯೆಗಳನ್ನು ಅರಿತು ಹೃದಯದಿಂದ ಅದಕ್ಕೆ ಪರಿಹಾರ ಕೊಡುವುದು. ಅನುಷ್ಠಾನ ಮಾಡುವುದು ಆಡಳಿತ. ಈ ಚಿಂತನೆಯಿಂದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಜನರ ಅಲೆದಾಟ ತಪ್ಪುತ್ತದೆ. 50 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಇದರಿಂದ ಉಪಯೋಗವಾಗಲಿದೆ. ವ್ಯವಸ್ಥೆ ಸರಿ ಇಲ್ಲದ್ದರಿಂದ ಇದನ್ನು ಮಾಡಬೇಕಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿಯ ಪಿಂಚಣಿಗಳು ನೇರವಾಗಿ ಮನೆ ಬಾಗಿಲಿಗೆ ಮುಟ್ಟಬೇಕು. ಸಮಾಜದಲ್ಲಿ ಆಶ್ರಯವಿಲ್ಲದವರಿಗೆ, ಸಹಾಯವಿಲ್ಲದವರಿಗೆ ಪಿಂಚಣಿ ನೀಡಲಾಗುತ್ತದೆ. ವ್ಯವಸ್ಥೆ ಸರಿಪಡಿಸಲು ಕಂದಾಯ ಇಲಾಖೆಯನ್ನು ಚುರುಕುಗೊಳಿಸಲಾಗಿದೆ. ವ್ಯವಸ್ಥೆಯನ್ನು ಸರಿಪಡಿಸಿ ಈ ಕೆಲಸವನ್ನು ಮಾಡಲಾಗುತ್ತಿದೆ. ಇದು ಜನಪರವಾದ ಆಡಳಿತ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸಭೆಯಲ್ಲಿ ಅಧಿಕಾರ ಹೆಪ್ಪುಗಟ್ಟಬಾರದು. ಅಧಿಕಾರ ನೇರವಾಗಿ ಜೇನುತುಪ್ಪದಂತೆ ಹರಿಯುವಂತಿರಬೇಕು. ಇಂದಿನ ಕಾರ್ಯಕ್ರಮ ನೇರವಾಗಿ ಜನರಿಗೆ ತಲುಪುವಂಥದ್ದು ಎಂದರು.

ಜನರೊಂದಿಗೆ ನಿರಂತರ ಸಂಪರ್ಕವಿದ್ದರೆ ಜನಪರ ಆಡಳಿತ ಸಾಧ್ಯ

ಆಡಳಿತ ಮತ್ತು ರಾಜಕಾರಣ ಜನಪರವಾಗಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಧಿಕಾರಕ್ಕೆ ಬಂದಾಗ ತಮ್ಮ ಸ್ವಂತ ಅಧಿಕಾರದ ಬಗ್ಗೆ ಚಿಂತೆ ಮಾಡುವವರು ದೇಶವನ್ನು ಹಾನಿ ಮಾಡಿದ್ದಾರೆ. ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಿ ನೊಂದವರಿಗೆ ಸಹಾಯ ಮಾಡಿದವರನ್ನು ಜನ ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆ. ಸಮಸ್ಯೆಗಳೊಂದಿಗೆ ಬದುಕುವುದಕ್ಕೂ, ಚರ್ಚೆ ಮಾಡುವುದಕ್ಕೂ ಅಂತರವಿದೆ. ಆಡಳಿತ ಜನರ ಬಳಿಗೆ ಸಮಸ್ಯೆಯ ಬಳಿಗೆ ಹೋದಾಗ ನೈಜ ಪರಿಹಾರ ಸಿಗುತ್ತದೆ. ಜನರ ಜೊತೆಗೆ ನಿರಂತರ ಸಂಪರ್ಕ, ಸಂವಾದ ಇದ್ದರೆ ಜನಪರ ಆಡಳಿತ ನೀಡಲು ಸಾಧ್ಯ. ಜನರ ಮಧ್ಯೆ ಇದ್ದು ಜನರ ಸಮಸ್ಯೆ ತಿಳಿದುಕೊಂಡು ಮೇಲೆ ಬಂದರೆ, ಜನರ ಸಮಸ್ಯೆಗೆ ಖಂಡಿತವಾಗಿಯೂ ಸಮಸ್ಯೆ ಅರ್ಥ ಮಾಡಿಕೊಂಡಿರುತ್ತಾರೆ.

ಅಧಿಕಾರ ಸ್ವೀಕರಿಸಿದ ದಿನ ನನ್ನ ಮೊದಲನೇ ನಿರ್ಣಯ ರೈತರ ಮಕ್ಕಳಿಗೆ ವಿದ್ಯಾ ನಿಧಿ ಯೋಜನೆ ಘೋಷಣೆ ಮಾಡಿದ್ದು. ಹೆಣ್ಣುಮಕ್ಕಳಿಗೂ ಇದನ್ನು ವಿಸ್ತರಿಸಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ, ವಿಧವಾ ವೇತನ ವನ್ನು ಹೆಚ್ಚಳ ಮಾಡಲಾಗಿದೆ. ಇನ್ನೊಬ್ಬರನ್ನು ಬೇಡದಂತೆ ಜೀವನ ನಡೆಸಲು ಈ ಬದಲಾವಣೆ ತರಲಾಗಿದೆ. ಬಜೆಟ್‍ನಲ್ಲಿ ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ಬದುಕು ಬಹಳ ಕಷ್ಟ. ಕ್ರೌರ್ಯವನ್ನು ಅನುಭವಿಸಿಯೂ ಆತ್ಮಸ್ರ್ಥೈರ್ಯದಿಂದ ಕೆಲಸ ಮಾಡುತ್ತಿರುವುದು ಹಾಗೂ ಬದುಕಿನ ಮೇಲೆ ಅವರಿಗೆ ಭರವಸೆ ಇರುವುದು ಶ್ಲಾಘನೀಯ. ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕಬೇಕೆಂದು ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳು 3000 ದಿಂದ 10 ಸಾವಿರಕ್ಕೆ ವೇತನವನ್ನು ಏರಿಸಲಾಗಿದೆ ಎಂದರು.

ಕತ್ತಲಲ್ಲಿರುವವರನ್ನು ಬೆಳಕಿನೆಡೆಗೆ ತರೋಣ

ಬಜೆಟ್‍ನಲ್ಲಿ ಸೂಕ್ಷ್ಮಾತಿ ಸೂಕ್ಮ ವಿಚಾರಗಳನ್ನು ಹೇಳಲಾಗಿದೆ. ಡಯಾಲಿಸಿಸ್ ಗೆ ಒಳಗಾಗುವವರಿಗೆ 30 ಸಾವಿರ ಇದ್ದ ಡಯಾಲಿಸ್ ನ್ನು 60 ಸೈಕಲ್‍ಗಳಿಗೆ ಸಾವಿರಕ್ಕೆ ಹೆಚ್ಚಿಸಿ ಉಚಿತ ಡಯಾಲಿಸಿಸ್‍ಗೆ ವ್ಯವಸ್ಥೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 11 ಹೊಸ ಕೇಂದ್ರಗಳನ್ನು ಸ್ಥಾಪಿಸಿ ಬಡಜನಕ್ಕೆ ಕೀಮೋಥೆರಪಿಯನ್ನು ಈಗ ನೀಡುವುದಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಆರೋಗ್ಯ ತಪಾಸಣೆ, 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕಿವುಡರಿಗೆ ಕಾಕ್ಲಿಯರ್ ಇಂಪ್ಲಾಂಟ್ ಗೆ ವ್ಯವಸ್ಥೆ ಮಾಡಲಾಗಿದೆ. ಮಾನವೀಯತೆ ಇರುವ, ಹೃದಯವಂತ ಆಡಳಿತ ವ್ಯವಸ್ಥೆ ಇರಬೇಕು. ಆಗ ಸಂಕಷ್ಟದಲ್ಲಿರುವವರಿಗೆ ಆತ್ಮವಿಶ್ವಾಸ ಬರುತ್ತದೆ. ಕತ್ತಲಲ್ಲಿರುವವರನ್ನು ಬೆಳಕಿನೆಡೆಗೆ ಕರೆದುತರುವ ಕೆಲಸ ಮಾಡಬೇಕು ಎಂದರು.

ಆಡಳಿತದಲ್ಲಿ ದೊಡ್ಡ ಜನಪರ ಸುಧಾರಣೆ

ಇಂದಿನ ಕಾರ್ಯಕ್ರಮ ವಯಸ್ಸಾದವರಿಗೆ, ವಿಧವೆಯರಿಗೆ ಉಪಯೋಗವಾಗಲಿದೆ. ಕಂದಾಯ ದಾಖಲೆಗಳು, ಪಿಂಚಣಿ, ಗ್ರಾಮ ಪಂಚಾಯತ್ ದಾಖಲೆಗಳನ್ನು ನೀಡುವಂಥ ಕೆಲಸವಾಗಿದೆ. ಈ ಮೂಲಕ ಆಡಳಿತದಲ್ಲಿ ಬಹಳ ದೊಡ್ಡ ಜನಪರವಾದ ಸುಧಾರಣೆಯನ್ನು ತರಲಾಗಿದೆ. ಜನರಿಗೋಸ್ಕರ ಇರುವ ಸರ್ಕಾರವಿದು ಎನ್ನುವ ವಿಶ್ವಾಸವನ್ನು ತುಂಬುವ ರೀತಿಯಲ್ಲಿ ಆಡಳಿದಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಇನ್ನೂ ಹಲವಾರು ಹೆಜ್ಜೆಗಳ ಪ್ರಯಾಣ ಮಾಡಬೇಕಿದೆ. ಅಂತ:ಕರಣದಿಂದ ಆಡಳಿಕೆಯನ್ನು ನಡೆಸೋಣ. ಜನಪರ ನಿಲುವು ತೆಗೆದುಕೊಳ್ಳಲು ನಮ್ಮ ಸರ್ಕಾರ ಹಿಂದುಮುಂದೆ ನೋಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next