ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅವಳಿ ಜಿಲ್ಲೆಯ ಮಧ್ಯೆ ಇರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರು, ಯುಕೆಪಿ ಯೋಜನೆ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಆಡಿದ ಮಾತುಗಳು ಈ ಭಾಗದ ಜನರಲ್ಲಿ ಒಂದಷ್ಟು ಭರವಸೆ ಮೂಡಿಸಿವೆ.
ಹೌದು, ಈ ಹಿಂದೆ ಸ್ವತಃ ಜಲ ಸಂಪನ್ಮೂಲ ಸಚಿವರಾಗಿದ್ದ ಬೊಮ್ಮಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಆಳಗಲ ತಿಳಿದವರು. ಅವರು ಸಚಿವರಾಗಿದ್ದಾಗ ಈ ಭಾಗದ ಪುನರ್‌ವಸತಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಸುಮಾರು 197 ಕೋಟಿ ಅನುದಾನ ಕೂಡ ನೀಡಿದ್ದರು. ಜತೆಗೆ ಯುಕೆಪಿ 3ನೇ ಹಂತದ ಯೋಜನೆಗೆ 17,208 ಕೋಟಿ ಮೊತ್ತಕ್ಕೆ ಅನುಮೋದನೆ ಕೂಡ ಪಡೆದಿದ್ದರು. ಆದರೆ, ಅದು ಅಂದುಕೊಂಡಂತೆ ಆಗಲಿಲ್ಲ. 2010ರಲ್ಲಿ ಕೈಗೊಂಡ ಆ ನಿರ್ಣಯ, 2021 ಬಂದರೂ ಆಗಿಲ್ಲ. 17 ಸಾವಿರ ಕೋಟಿಯಲ್ಲಿ ಮುಗಿಯಬೇಕಿದ್ದ ಈ ಯೋಜನೆ, ಇದೀಗ 50 ಸಾವಿರ ಕೋಟಿ ದಾಟಿದೆ. ಭೂಸ್ವಾಧೀನ, ಪುನರ್‌ವಸತಿ, ಪುನರ್ ನಿರ್ಮಾಣ, ನೀರಾವರಿ ಯೋಜನೆ ಹೀಗೆ ಎಲ್ಲ ಹಂತದ ಕಾಮಗಾರಿಗೆ 1 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಸ್ಪಷ್ಟತೆ ಇಲ್ಲದೇ ಯುಕೆಪಿ ಯೋಜನೆ ಕುಂಟುತ್ತಲೇ ಸಾಗುತ್ತಿದೆ.
ರಾಷ್ಟ್ರೀಯ ಯೋಜನೆಗೆ ಪ್ರಯತ್ನ: ದೇಶದಲ್ಲೇ ಅತಿದೊಡ್ಡ ಹಾಗೂ ಸುಮಾರು ಆರು ದಶಕಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ಬೇಕಿದೆ. ಜತೆಗೆ ಅಗತ್ಯ ಅನುದಾನವೂ ಬೇಕಿದೆ. 1 ಲಕ್ಷ ಕೋಟಿ ಅನುದಾನ ಒಂದೇ ಕಂತಿನಲ್ಲಿ ನೀಡುವಷ್ಟು ಸಶಕ್ತ ಆರ್ಥಿಕ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೂ ಇಲ್ಲ. ಹೀಗಾಗಿ ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಆರ್ಥಿಕ ನೆರವು ಬೇಕು. ಅದಕ್ಕಾಗಿ ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ಅನುದಾನ ಕೊಡಲು ಸಾಧ್ಯ. ಅದಕ್ಕೂ ಮುಂಚೆ ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದರೆ, ಉತ್ತರ ಕರ್ನಾಟಕಕ್ಕೆ ಆಗುವ ಸಾಧಕ-ಬಾಧಕಗಳ ಕುರಿತು ಅಧ್ಯಯನಕ್ಕೆ ಬೊಮ್ಮಾಯಿ ಸರ್ಕಾರ ನಿರ್ಧರಿಸಿದ್ದು, ಇದು ಉತ್ತಮ ನಡೆ ಕೂಡ. ರಾಷ್ಟ್ರೀಯ ಯೋಜನೆ ಘೋಷಣೆಯ ಬಳಿಕ ಕೇಂದ್ರ ಸರ್ಕಾರವೂ ಆರ್ಥಿಕ ನೆರವು ಕೊಡಲಿದೆ. ಆದರೆ, ಕೃಷ್ಣಾ ನದಿ ನೀರು ಬಳಕೆಯ ವಿಷಯದಲ್ಲಿ ಕೇಂದ್ರ ಸರ್ಕಾರ, ಪ್ರತ್ಯೇಕ ಯೋಜನೆಗಳು ರೂಪಿಸಿದರೆ ಅದು ಈ ಭಾಗಕ್ಕೆ ಆಗುವ ತೊಂದರೆ. ಈಗಾಗಲೇ ಯುಕೆಪಿ 3ನೇ ಹಂತದಲ್ಲಿ 9 ಉಪ ಯೋಜನೆಗಳಿದ್ದು, ಅವು ಪೂರ್ಣಗೊಳ್ಳಬೇಕಿದೆ.
22 ಗ್ರಾಮಗಳ ಸ್ಥಳಾಂತರ, 1.36 ಲಕ್ಷ ಎಕರೆ ಭೂಮಿಗೆ ಪರಿಹಾರ ಹೀಗೆ ಈಗಾಗಲೇ ಇರುವ ಯೋಜನೆಗಳಿಗೆ ಕೇಂದ್ರ ನೆರವಾದರೆ ಯಾವುದೇ ಬಾಧಕ ಇಲ್ಲ. ಅನುದಾನ ಕೊಟ್ಟ ತಕ್ಷಣ, ಹಿಡಿತ ಸಾಧಿಸಿದರೆ ಅದು ನಮ್ಮ ಭಾಗಕ್ಕೆ ಲಾಭಕ್ಕಿಂತ ತೊಂದರೆಯೇ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಇದೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿರುವ ಸಿಎಂ ಬೊಮ್ಮಾಯಿ, ಇದಕ್ಕಾಗಿಯೇ ತಾಂತ್ರಿಕ ಹಾಗೂ ನೀರಾವರಿ ತಜ್ಞರು, ಹಿರಿಯ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲು ನಿರ್ಧರಿಸಿದ್ದು, ಅದಕ್ಕೆ ನಿರ್ದಿಷ್ಟ ಗಡುವು ನೀಡಿದ್ದಾರೆ.
ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ: ಯುಕೆಪಿ 3ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಒಳಗೊಂಡ ವಿಶೇಷ ಸಭೆಯನ್ನು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲು ನಿರ್ಧರಿಸಿದ್ದಾಗಿ ಶನಿವಾರ ಆಲಮಟ್ಟಿಯಲ್ಲಿ ತಿಳಿಸಿದ್ದಾರೆ. ಹೈಪವರ್ ಕಮೀಟಿ ಸಭೆಗೂ ಮುನ್ನ ಈ ಸಭೆ ನಡೆಸಿ, ಹಲವು ಸಾಧಕ-ಬಾಧಕಗಳ ಹಾಗೂ ಯುಕೆಪಿ ಯೋಜನೆ ನಿರ್ದಿಷ್ಟ ಪ್ರಮಾಣದಲ್ಲಿ ಮುಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಂಡರೆ ಅದಕ್ಕೊಂದು ಸ್ಪಷ್ಟ ರೂಪ ಬರಲಿದೆ. ಜತೆಗೆ ಇದಕ್ಕಾಗಿ ಅನುದಾನ ಹೊಂದಾಣಿಕೆ ಮಾಡಿಕೊಳ್ಳುವ ಕುರಿತೂ ಬೊಮ್ಮಾಯಿ, ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ರಾಜ್ಯದ ಸಾಲದ ಸ್ಥಿತಿಗತಿ, ಬೇರೆ ಬೇರೆ ಏಜನ್ಸಿಗಳಿಂದ ದೊರೆಯಬಹುದಾದ ಸಾಲಗಳ ಕುರಿತೂ ಅವರು ಗಂಭೀರ ಚಿಂತನೆಯಲ್ಲಿರುವುದು ಶನಿವಾರದ ಅವರ ಭೇಟಿಯಿಂದ ಸ್ಪಷ್ಟಗೊಂಡಿತು.
ಮೋದಿ ಭೇಟಿಗೆ ನಿರ್ಧಾರ: ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧೀಕರಣ ಕಳೆದ 2010ರಲ್ಲೇ ತನ್ನ ಅಂತಿಮ ತೀರ್ಪು ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಬಿದ್ದಿಲ್ಲ. ಅಧಿಸೂಚನೆ ಹೊರ ಬೀಳುವವರೆಗೂ ನೀರು ಬಳಸಿಕೊಳ್ಳಲು ಕಷ್ಟಸಾಧ್ಯ. ಅಲ್ಲದೇ ಆಂದ್ರಪ್ರದೇಶದಿಂದ ಪ್ರತ್ಯೇಕಗೊಂಡ ತೆಲಂಗಾಣ ರಾಜ್ಯ, ಕೃಷ್ಣಾ ನದಿ ನೀರು ಹಂಚಿಕೆಯನ್ನು ಮರು ಪರಿಶೀಲಿಸಿ, ತೆಲಂಗಾಣಕ್ಕೂ ಪ್ರತ್ಯೇಕವಾಗಿ ನೀರು ಹಂಚಿಕೆ ಮಾಡಲು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೀಗಾಗಿ ಅಧಿಸೂಚನೆ ತಡವಾಗಿದೆ. ಈ ಕುರಿತು ಕರ್ನಾಟಕ, ಮಹಾರಾಷ್ಟ್ರ ಜಂಟಿಯಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದು, ಈ ವಿಷಯದಲ್ಲಿ ಮಹರಾಷ್ಟ್ರದ ನೀರಾವರಿ ಸಚಿವರು, ಶರದ ಪವಾರ ಅವರೊಂದಿಗೆ ಸ್ವತಃ ಸಿಎಂ ಚರ್ಚೆ ಮಾಡಿದ್ದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಅಧಿಸೂಚನೆ ಹೊರಡಿಸುವ ವಿಷಯದಲ್ಲಿ ಒತ್ತಾಯ ಮಾಡುವುದಾಗಿ ತಿಳಿಸಿದರು. ಇದು, ಯುಕೆಪಿ ನೀರಾವರಿ ವಿಷಯದಲ್ಲಿ ಉತ್ತಮ ಬೆಳವಣಿಗೆ ಕೂಡ.