Advertisement

ಸಿಎಂ ಬೊಮ್ಮಾಯಿಗೆ ನಾಯಕತ್ವ ಸತ್ವಪರೀಕ್ಷೆ   

02:14 PM Oct 12, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ತಮ್ಮದೇ ನಾಯಕತ್ವ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದು, ಆದರೆ ಇದೀಗ ನಾಯಕತ್ವದ ತಯಾರಿಗೆ ಕಿರು ಪರೀಕ್ಷೆ ಎದುರಿಸಬೇಕಿದೆ. ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆ ಹಾನಗಲ್ಲ ಉಪ ಚುನಾವಣೆ ಸಿಎಂ ನಾಯಕತ್ವಕ್ಕೆ ಸತ್ವ ಪರೀಕ್ಷೆ ತಂದೊಡ್ಡಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಒಂದೆರಡು ದಶಕಗಳ ಚುನಾವಣೆ ಫಲಿತಾಂಶ ನೋಡುತ್ತ ಬಂದರೆ ಯಾರೊಬ್ಬರಿಗೂ ಸತತ ಮೂರ್‍ನಾಲ್ಕು ಬಾರಿ ಜಯದ ಏಕಸ್ವಾಮ್ಯತೆ ನೀಡದ ಮತದಾರ, ಅಭ್ಯರ್ಥಿಗಳನ್ನು ಹಾವು-ಏಣಿ ಆಟ ಆಡಿಸುತ್ತ ಬಂದಿದ್ದಾನೆ. ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಹೆಚ್ಚಿನ ಕಾಲ ಮುಖಾಮುಖೀ-ಜಿದ್ದಾಜಿದ್ದಿ ಪೈಪೋಟಿ ನಡೆಸುತ್ತ ಬಂದವರು ಸಿ.ಎಂ.ಉದಾಸಿ ಹಾಗೂ ಮನೋಹರ ತಹಶೀಲ್ದಾರ ಅವರು. ಸಿ.ಎಂ.ಉದಾಸಿಯವರ ನಿಧನದಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳಿಬ್ಬರಿಗೂ ಸಾಮರ್ಥ್ಯ ಪ್ರದರ್ಶನದ ಸವಾಲು ತಂದೊಡ್ಡಿದೆ. ರಾಜ್ಯದಲ್ಲಿ ಆಡಳಿತಲ್ಲಿದ್ದು, ಉಪ ಚುನಾವಣೆಯಲ್ಲಿ ತನ್ನದೇ ಕ್ಷೇತ್ರ ಉಳಿಸಿಕೊಳ್ಳುವ ಮೂಲಕ ಕ್ಷೇತ್ರದ ಮೇಲಿನ ಹಿಡಿತ ಹೆಚ್ಚಿಸುವ ಬಯಕೆ ಬಿಜೆಪಿಯದ್ದಾಗಿದ್ದು, 2018ರ ಚುನಾವಣೆಯಲ್ಲಿ ಸುಮಾರು 6,514 ಮತಗಳ ಅಂತರದಿಂದ ಸೋಲು ಕಂಡಿದ್ದು, ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಬೇಕೆಂಬ ತವಕ ಕಾಂಗ್ರೆಸ್ಸಿನದಾಗಿದೆ. ಇದರ ನಡುವೆ ಜೆಡಿಎಸ್‌ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ವ್ಯಕ್ತಿ ಪ್ರಾಧಾನ್ಯ ವ್ಯವಸ್ಥೆಯೇ ಹಲವು ದಶಕಗಳವರೆಗೆ ಮುಂದುವರಿಯುತ್ತ ಬಂದಿದ್ದು, ಇದೀಗ ಪಕ್ಷ ಪ್ರತಿಷ್ಠೆ ಏನೆಂಬುದು ಓರೆಗಲ್ಲಿಗಚ್ಚಿದಂತಾಗಿದೆ.

ಸಿಎಂಗೆ ನಾಯಕತ್ವ ಸವಾಲು: ರಾಜ್ಯದ ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾಣೆ ನಂತರದಲ್ಲಿ ಮುಂದಿನ ಚುನಾವಣೆಗೆ ನಾಯಕತ್ವದ ಪ್ರಶ್ನೆ ಎದುರಾಗುವ ಮೊದಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದಾವಣಗೆರೆಯಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಘೋಷಣೆ ಮೂಲಕ ಸಂಚಲನ ಉಂಟು ಮಾಡಿದ್ದರು. ಇದಕ್ಕೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗಿದ್ದವಾದರೂ ಇದಾದ ಕೆಲ ದಿನಗಳಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ಚುನಾವಣೆ ತಮ್ಮ ನಾಯಕತ್ವದಲ್ಲೇ ನಡೆಯುತ್ತದೆ ಎಂದು ಹೇಳುವ ಮೂಲಕ ಸ್ಪಷ್ಟ ಸಂದೇಶ ರವಾನೆಗೆ ಮುಂದಾಗಿದ್ದರು.

ಹಾವೇರಿ ಜಿಲ್ಲೆಯ ಹಾನಗಲ್ಲ, ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದ್ದು, ಎರಡಲ್ಲೂ ಆಡಳಿತರೂಢ ಬಿಜೆಪಿ ಗೆಲ್ಲಬೇಕಿದೆ. ವಿಶೇಷವಾಗಿ ಸಿಎಂಗೆ ಹಾನಗಲ್ಲ ಎಲ್ಲ ರೀತಿಯಿಂದಲೂ ಸವಾಲು ರೂಪದಲ್ಲಿ ನಿಂತಿದೆ ಎಂಬುದನ್ನು ಬಿಜೆಪಿ ಮೂಲಗಳು ಒಪ್ಪಿಕೊಳ್ಳುತ್ತಿವೆ. ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ವ್ಯತಿರಿಕ್ತವಾದರೂ ಸರಕಾರಕ್ಕೇನು ಧಕ್ಕೆ ಆಗದು. ಆದರೆ, ವಿಪಕ್ಷಗಳಿಗೆ ಬಹುದೊಡ್ಡ ಅಸ್ತ್ರ ದೊರೆತಂತಾಗಲಿದೆ. ಜತೆಗೆ 2023ರ ಚುನಾವಣೆ ದೃಷ್ಟಿಯಿಂದ ನೈತಿಕ ಸ್ಥೈರ್ಯ ಕುಗ್ಗಲಿದೆ.ಮುಂದಿನ ಚುನಾವಣೆ ನಾಯಕತ್ವಕ್ಕೆ ಹಾನಗಲ್ಲ ಉಪ ಚುನಾವಣೆ ಫಲಿತಾಂಶ ಸಿಎಂ ಪಾಲಿಗೆ ಶ್ರೀಕಾರ ಆಗಲಿದೆ.

Advertisement

ಬಿಜೆಪಿ ಗೆಲ್ಲಲೇಬೇಕಿದೆ: ಹಾನಗಲ್ಲ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಿದೆ. ಅದರಲ್ಲೂ ಯಾವುದೇ ದೃಷ್ಟಿಯಿಂದ ನೋಡಿದರೂ ಹಾನಗಲ್ಲನಲ್ಲಿ ಮಾತ್ರ ಬಿಜೆಪಿ ವಿಜಯ ಸಾಧಿಸಲೇಬೇಕಿದೆ. ಇದಕ್ಕೆ ಕಾರಣ ಹಲವು. ಮುಖ್ಯಮಂತ್ರಿಯವರ ಸ್ವಂತ ಜಿಲ್ಲೆಯಾಗಿದೆ, ಮೇಲಾಗಿ ಹಾನಗಲ್ಲ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತಿದ್ದು, ಕ್ಷೇತ್ರ ಉಳಿಸಿಕೊಳ್ಳಬೇಕಿದೆ. ಇನ್ನೊಂದು ಕುಟುಂಬ ರಾಜಕಾರಣಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಕುಟುಂಬದವರಿಗೆ ಮಣೆ ಹಾಕದೆ ಬೇರೆಯವರಿಗೆ ಟಿಕೆಟ್‌ ನೀಡಿರುವ ಹೈಕಮಾಂಡ್‌ ನಿರ್ಣಯ ಸರಿ ಎಂಬುದನ್ನು ಸಾಬೀತು ಪಡಿಸುವ ಅನಿವಾರ್ಯತೆ ಇದೆ. ಸಾಮಾನ್ಯವಾಗಿ ಉಪ ಚುನಾವಣೆಗಳು ಆಡಳಿತ ಪಕ್ಷದ ಪರ ಫಲಿತಾಂಶ ನೀಡುತ್ತವೆ ಎಂಬ ಅನಿಸಿಕೆ ಇದೆಯಾದರೂ ಹಾನಗಲ್ಲ ಕ್ಷೇತ್ರದಲ್ಲಿ ಬಿಜೆಪಿ ಅಂದುಕೊಂಡತಿಲ್ಲ ಎಂದು ಹೇಳಲಾಗುತ್ತಿದೆ. ಟಿಕೆಟ್‌ ಘೋಷಣೆ ನಂತರ ಸ್ಫೋಟಗೊಂಡಿದ್ದ ಅಸಮಾಧಾನ ಶಮನ ಮಾಡಲಾಗುತ್ತಿದೆ. ಕಾರ್ಯಕರ್ತರನ್ನು ಇನ್ನಷ್ಟು ಸಜ್ಜುಗೊಳಿಸಬೇಕಿದೆ. ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಿಸಬೇಕಿದೆ. ಮುಖ್ಯವಾಗಿ ಮತದಾರರ ಓಲೈಕೆ, ಅವರ ಮನದೊಳಗೆ ಉಂಟಾಗಿರುವ ಅಸಮಾಧಾನ ಇಲ್ಲವಾಗಿಸಲು ಬಿಜೆಪಿ ಸಾಕಷ್ಟು ಬೆವರಿಳಿಸಬೇಕಿದೆ ಎಂದು ಹೇಳಲಾಗುತ್ತಿದೆ.

ಕೈ ಕಳೆದುಕೊಳ್ಳುವುದೇನಿಲ್ಲ ಆದರೆ: ಹಾನಗಲ್ಲ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ತನಗೆ ವ್ಯತಿರಿಕ್ತವಾದರೂ ಕಾಂಗ್ರೆಸ್‌ ಕಳೆದುಕೊಳ್ಳುವುದೇನಿಲ್ಲ. ಸಿಂದಗಿ ಕ್ಷೇತ್ರವನ್ನು ಜೆಡಿಎಸ್‌, ಹಾನಗಲ್ಲ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತಿದ್ದು, ಎರಡರಲ್ಲಿ ಯಾವುದರಲ್ಲಿ ಗೆದ್ದರೂ ಕಾಂಗ್ರೆಸ್‌ಗೆ ಪ್ಲಸ್‌ ಆಗಲಿದೆ. ಜತೆಗೆ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್‌ನ ಆತ್ಮವಿಶ್ವಾಸ ಹೆಚ್ಚುವುದು ಖಂಡಿತ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗಾಳಿಯ ನಡುವೆಯೂ ಕೇವಲ 6,514 ಮತಗಳ ಸೋಲು ಕಂಡಿದ್ದ ಕಾಂಗ್ರೆಸ್‌ ಇದೀಗ ಮತ್ತೂಮ್ಮೆ ವಿಧಾನ ಪರಿಷತ್ತು ಸದಸ್ಯ ಶ್ರೀನಿವಾಸ ಮಾನೆ ಅವರನ್ನೇ ಕಣಕ್ಕಿಳಿಸಿದೆ.

ಹಲವು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರು ಟಿಕೆಟ್‌ ಗೆ ತೀವ್ರ ಪೈಪೋಟಿ ನಡೆಸಿದ್ದರಲ್ಲದೆ, ಟಿಕೆಟ್‌ ಸಿಗದೆ ಅಸಮಾಧಾನ ತೋಡಿಕೊಂಡಿದ್ದರು. ಈ ಅಸಮಾಧಾನ ಒಳಪೆಟ್ಟಿನ ರೂಪದಲ್ಲಿ ಮುಂದುವರಿದರೆ ಕಾಂಗ್ರೆಸ್‌ ಗೆ ಪೆಟ್ಟು ಕೊಡಲಿದೆ ಎನ್ನಲಾಗಿದೆ. ಕಳೆದ ಬಾರಿಯ ಸೋಲಿನ ಅನುಕಂಪ ಪಡೆಯಲು ಹಾಗೂ ಕೋವಿಡ್‌ ಸೇರಿದಂತೆ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ಸುತ್ತಾಡಿದ, ನೆರವಿನ ಕಾರ್ಯದಲ್ಲಿ ತೊಡಗಿದ ಮಾನೆಯವರಿಗೆ ವರದಾನವಾಗಲಿದೆ ಎಂಬುದು ಕಾಂಗ್ರೆಸ್‌ನ ನಂಬಿಕೆ. ಇನ್ನು ಜೆಡಿಎಸ್‌ ಎರಡು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರು ಅಲ್ಪಸಂಖ್ಯಾತರಾಗಿದ್ದಾರೆ. ಸಿಂದಗಿ ಜೆಡಿಎಸ್‌ ಪ್ರತಿನಿಧಿತ್ವ ಕ್ಷೇತ್ರವಾಗಿದ್ದು, ಅಲ್ಲಿ ಗೆಲ್ಲಬೇಕಿದೆ. ಎರಡು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಮೂರು ಪಕ್ಷಗಳು ಕಸರತ್ತು ನಡೆಸಿದ್ದು, ಮತದಾರರ ಯಾರ ಪರ ಎಂಬುದು ಕಾಯ್ದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next