Advertisement

ಬಸನಗೌಡ ಯತ್ನಾಳ್‌ ವಿರುದ್ಧ ಸಿಎಂ ಬೊಮ್ಮಾಯಿ ಗುಡುಗು

12:38 AM Jan 15, 2023 | Team Udayavani |

ಬೆಂಗಳೂರು: ಪಂಚಮಸಾಲಿ ಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ವಾಗ್ವಾದ ತಾರಕಕ್ಕೇರಿದೆ. ತಮ್ಮ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿರುವ ಶಾಸಕ ಬಸನಗೌಡ ಯತ್ನಾಳ್‌ಗೆ ಸಿಎಂ ಬೊಮ್ಮಾಯಿ ಇದೇ ಮೊದಲ ಬಾರಿಗೆ ಬಿಸಿ ಮುಟ್ಟಿಸಿದ್ದಾರೆ. ಇನ್ನೊಂದೆಡೆ ಯತ್ನಾಳ್‌ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿರುವ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಪಕ್ಷದಲ್ಲಿ ಇರುವುದಕ್ಕೆ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಟು ಹೋಗಿ ಎಂದು ಹೇಳಿದ್ದಾರೆ.

Advertisement

ಹರಜಾತ್ರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸಾರ್ವಜನಿಕ ಜೀವನದಲ್ಲಿ ಇರುವವರೆಲ್ಲರೂ ಜನಮನ್ನಣೆ ಪಡೆದುಕೊಂಡೇ ಇರುತ್ತಾರೆ. ಯಾರ ಬಗ್ಗೆಯೂ ವೈಯಕ್ತಿಕ ನಿಂದನೆಯ ಮಾತುಗಳನ್ನಾಡುವುದು ಸರಿಯಲ್ಲ. ಆ ರೀತಿ ಹೇಳಿಕೆ ನೀಡಿದರೆ ಅದು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಯತ್ನಾಳ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮೀಸಲು ವಿಚಾರದಲ್ಲಿ ನಾವು ಬದ್ಧತೆಯಿಂದ ಕೆಲಸ ಮಾಡಿದ್ದೇವೆ. ಆದರೆ ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್‌ ರಾಜಕೀಯದ ರೊಟ್ಟಿ ಬೇಯಿಸಿ ಕೊಳ್ಳುತ್ತಿದೆ. ಸರಕಾರ ಹಾಗೂ ಪಕ್ಷದ ವಿರುದ್ಧ ಮಾತನಾಡುವವರ ವಿರುದ್ಧ ಪಕ್ಷ ಸೂಕ್ತ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳುತ್ತದೆ. ವಿಜಯಾನಂದ ಕಾಶಪ್ಪನವರ್‌ ಅವರ ತಂದೆ ಸಚಿವರಾಗಿದ್ದಾಗ ಯಾಕೆ ಮೀಸಲು ನಿರ್ಣಯ ತೆಗೆದುಕೊಳ್ಳಲಿಲ್ಲ? 2016ರಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿದ್ದಾಗ ಕಾಂತರಾಜ್‌ ಆಯೋಗ ಇವರು ಸಲ್ಲಿಸಿದ್ದ ಮೀಸಲು ಬೇಡಿಕೆಯನ್ನು ತಿರಸ್ಕರಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಮೀಸಲು ಸೌಲಭ್ಯಕ್ಕೆ ಒತ್ತಾಯಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮತ್ತೆ ಸತ್ಯಾಗ್ರಹ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. 2 ದಿನಗಳ ಕಾಲ ಹಬ್ಬ ಇರುವುದರಿಂದ ಯಾರೂ ಬೆಂಗಳೂರಿಗೆ ಬರುವುದು ಬೇಡ. ಆ ಬಳಿಕ ಬೆಂಗಳೂರಿನಲ್ಲಿ ನಮ್ಮ ಬೇಡಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸುವುದಕ್ಕೆ ಸ್ವಾಮೀಜಿ ಕರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಂಚಮಸಾಲಿ ಹೋರಾಟದಿಂದ ಬೆಲ್ಲದ್‌ ಹಿಂದಕ್ಕೆ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ದಿನೇದಿನೆ ಹಾದಿ ತಪ್ಪುತ್ತಿದೆ ಎಂದು ಭಾವಿಸಿರುವ ಶಾಸಕ ಅರವಿಂದ ಬೆಲ್ಲದ್‌ ಅವರು, ಈ ಹೋರಾಟದ ಮುಂಚೂಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಪಂಚಮಸಾಲಿ ಮೀಸಲು ಹೋರಾಟದ ವೇದಿಕೆ ಅಡಿಯಲ್ಲಿ ನಡೆಯುತ್ತಿರುವ ವೈಯಕ್ತಿಕ ನಿಂದನೆಗಳು ಹಾಗೂ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವ ನಿರ್ಧಾರಗಳು ಒಪ್ಪಿಗೆಯಾಗದಿರುವ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಸಂಪುಟ ಸಭೆಯಲ್ಲಿ ಮೀಸಲು ಸೌಲಭ್ಯ ಕೊಡಲು ನಿರ್ಣಯ ತೆಗೆದುಕೊಂಡ ಬಳಿಕವೂ ಸರಕಾರದ ಮೇಲೆ ಇಷ್ಟು ಒತ್ತಡ ಹಾಕುವ ಅಗತ್ಯವಿರಲಿಲ್ಲ. ಸರಕಾರದ ಜತೆಗೆ ಸ್ಪಂದಿಸಿದ್ದರೆ ಮಾರ್ಚ್‌ ಅಂತ್ಯಕ್ಕೆ ಸಮುದಾಯ ನಿರೀಕ್ಷಿಸುತ್ತಿದ್ದ ಸಂಗತಿಗಳು ಕಾರ್ಯ ರೂಪಕ್ಕೆ ಬರುತ್ತಿದ್ದವು. ವಿನಾ ಕಾರಣ ನಾವು ಗಡಿಬಿಡಿ ಮಾಡಿದಂತಾಯಿತು ಎಂದು ಬೆಲ್ಲದ್‌ ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಜತೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ಅರವಿಂದ ಬೆಲ್ಲದ್‌, ಸಂಪುಟ ಸಭೆಯಲ್ಲಿ ಮೀಸಲು ಸೌಲಭ್ಯ ನೀಡುವುದಕ್ಕೆ ಸರಕಾರ ಒಪ್ಪಿಕೊಂಡ ಬಳಿಕ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವಂಥ ನಿರ್ಣಯ ತೆಗೆದುಕೊಂಡಿದ್ದು ನನಗೆ ಸರಿ ಕಂಡಿಲ್ಲ. ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಕ್ಕೆ ನಾನು ಸಿದ್ಧನಿಲ್ಲ. ಹೀಗಾಗಿ ಈಗ ನಡೆಯುತ್ತಿರುವ ಹೋರಾಟದಿಂದ ನಾನು ಅಂತರ ಕಾಯ್ದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಈಗಾಗಲೇ ಮೊದಲ ಹೆಜ್ಜೆ ಇಟ್ಟಿದ್ದೇವೆ. ಶಾಸಕ ಬಸ ನ ಗೌಡ ಪಾಟೀಲ್‌ ಯತ್ನಾಳ್‌ ಇದನ್ನುಅರ್ಥ ಮಾಡಿಕೊಳ್ಳಬೇಕು. ಅವರು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾನೇನು ಮಾಡಬೇಕು, ಜನ ತೀರ್ಮಾನ ಮಾಡುತ್ತಾರೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಎಲುಬಿಲ್ಲದ ನಾಲಗೆ ಎಂದು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಸಂಸ್ಕಾರವಂತರು ಈ ರೀತಿ ಮಾತನಾಡುವುದಿಲ್ಲ. ಬಾಯಿ ಮುಚ್ಚಿಕೊಂಡು ಇರುವುದಕ್ಕೆ ಆಗದಿದ್ದರೆ ಪಕ್ಷ ಬಿಟ್ಟು ಹೋಗಿ. ಅದನ್ನು ಬಿಟ್ಟು ನಾಲಗೆ ಹರಿಬಿಟ್ಟರೆ ಕತ್ತರಿಸಬೇಕಾಗುತ್ತದೆ.
– ಮುರುಗೇಶ್‌ ನಿರಾಣಿ, ಬೃಹತ್‌ ಕೈಗಾರಿಕೆ ಸಚಿವ

ಸ್ವಾಮೀಜಿಗಳು ಪದೇಪದೆ ಸರಕಾರಕ್ಕೆ ಗಡುವು ಕೊಡುವುದು ಸರಿಯಲ್ಲ. ಸರಕಾರ ಈಗಾಗಲೇ ಸಮುದಾಯಕ್ಕೆ ಭರವಸೆ ನೀಡಿದೆ. ಫ‌ಲಶ್ರುತಿ ಸಿಗುವ ಹೊತ್ತಿನಲ್ಲಿ ಈ ರೀತಿ ಪ್ರತಿಭಟನೆ ನಡೆಸಿದರೆ ತಪ್ಪು ಸಂದೇಶ ಹೋಗುತ್ತದೆ. ಬಸನಗೌಡ ಯತ್ನಾಳ್‌ ಅವರ ಬಗ್ಗೆ ಭಯವಿಲ್ಲ.
-ಸಿ.ಸಿ.ಪಾಟೀಲ್‌, ಲೋಕೋಪಯೋಗಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next