Advertisement

ಈ ಬಾರಿ ಸಿಕ್ಕೀತೇ ವಿಸ್ತರಣೆ ಒಪ್ಪಿಗೆ? ನಾಳೆ ಸಿಎಂ ದಿಲ್ಲಿಗೆ: ಸಚಿವಾಕಾಂಕ್ಷಿಗಳಲ್ಲಿ ಕನಸು

01:28 AM May 09, 2022 | Team Udayavani |

ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಈ ಬಾರಿಯಾದರೂ ಕೈಗೂಡೀತೇ ಎಂಬ ಪ್ರಶ್ನೆ, ಕುತೂಹಲ ಜೋರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ದಿಲ್ಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಆಕಾಂಕ್ಷಿಗಳ ನಿರೀಕ್ಷೆ ಹೆಚ್ಚಾಗಿದೆ.

Advertisement

ನವೆಂಬರ್‌ನಲ್ಲಿ ರಾಜ್ಯದಲ್ಲಿ ನಡೆಯ ಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶ “ಇನ್ವೆಸ್ಟ್‌ ಕರ್ನಾಟಕ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು ಮತ್ತು ಹೈಕಮಿಷನರ್‌ಗಳ ಜತೆಗೆ ಸಮಾಲೋಚನೆ ನಡೆಸುವುದು ಮುಖ್ಯಮಂತ್ರಿಯ ಭೇಟಿಯ ಪ್ರಮುಖ ಉದ್ದೇಶ.

ಈ ಸಭೆಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಅದೇ ಕಾರಣಕ್ಕಾಗಿ ಸಿಎಂ ಮಂಗಳವಾರ ರಾತ್ರಿ ಬೆಂಗಳೂರಿಗೆ ಮರಳಬೇಕಿದ್ದುದನ್ನು ಬುಧವಾರಕ್ಕೆ ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ವರಿಷ್ಠರು ಒಪ್ಪಿದರೆ ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೀಗಾಗಿ ಈ ಬಾರಿಯ ಸಿಎಂ ದಿಲ್ಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Advertisement

ಮುಖಂಡರ ಸೇರ್ಪಡೆ
ಚರ್ಚೆ ಸಂಭವ
ಅನ್ಯಪಕ್ಷಗಳಿಂದ ಬರುವವ‌ರನ್ನು ಸೇರಿಸಿಕೊಳ್ಳುವ ಕುರಿತಂತೆ ಮುಖ್ಯ ಮಂತ್ರಿಯು ನಡ್ಡಾ ಜತೆಗೆ ಚರ್ಚಿಸುವ ಸಾಧ್ಯತೆ ಇದೆ. ಶನಿವಾರ ಬಿಜೆಪಿಗೆ ಸೇರಿರುವ ವರ್ತೂರು ಪ್ರಕಾಶ್‌ ಸಹಿತ ಕೆಲವರನ್ನು ಸೇರಿಸಿಕೊಳ್ಳಲು ವರಿಷ್ಠರ ಆಕ್ಷೇಪವಿತ್ತು ಎನ್ನಲಾಗಿದೆ. ಅದೇ ಕಾರಣಕ್ಕೆ ಶನಿವಾರ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಷಿ ಮತ್ತು ಮುಖ್ಯಮಂತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಮಾತುಕತೆ ನಡೆಸಿ, ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next