ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದಿಂದ ಜಿಎಸ್ ಟಿ ಪರಿಹಾರವನ್ನು ಇನ್ನೂ ಮೂರು ವರ್ಷಗಳಿಗೆ ಮುಂದುವರೆಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಮನವಿ ಮಾಡಿದರು.
ಕೋವಿಡ್ ಸಾಂಕ್ರಾಮಿ ದಿಂದಾಗಿ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿಎಸ್ ಟಿ ಪರಿಹಾರ ಸಾಲ ಒದಗಿಸಲಾಗಿತ್ತು. ಈ ವರ್ಷವೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ರಾಜ್ಯಗಳ ಹಣಕಾಸು ಸ್ಥಿತಿ ಸುಧಾರಿಸುವ ವರೆಗೆ ಕೇಂದ್ರದ ನೆರವು ಅತಿ ಅಗತ್ಯವಾಗಿದ್ದು ಮೂರು ವರ್ಷಗಳ ಅವಧಿಗೆ ಜಿಎಸ್ ಟಿ ಪರಿಹಾರ ವಿಸ್ತರಿಸುವಂತೆ ಮನವಿ ಮಾಡಿದರು.
15ನೆ ಹಣಕಾಸು ಆಯೋಗವು 2021 ರಿಂದ 2026 ರ ಅವಧಿಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಮಾಡಿದ ಶಿಫಾರಸಿನ ಅನ್ವಯ ರಾಜ್ಯದ ಹಂಚಿಕೆ 14 ನೆ ಹಣಕಾಸು ಆಯೋಗ ಶಿಫಾರಸು ಮಾಡಿದ ಶೇ. 4.71 ರಿಂದ ಶೇ. 3.647 ಕ್ಕೆ ಇಳಿಕೆಯಾಗಿದೆ. ಇದರಿಂದ ಅನುದಾನ ಹಂಚಿಕೆಯಲ್ಲಿ ತೀವ್ರ ಇಳಿಕೆಯಾಗಿದೆ. ಅನುದಾನ ಹಂಚಿಕೆ ಕುರಿತ ಮಾನದಂಡಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು ರಾಜ್ಯದ ಮನವಿಯನ್ನು ಆಯೋಗವು ಪರಿಗಣಿಸಿಲ್ಲ. ಇದರಿಂದಾಗಿ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇದನ್ನೂ ಓದಿ:ಸಿಖ್, ಹಿಂದೂಗಳು ಸೇರಿ 140 ಭಾರತೀಯರು ಅಫ್ಘಾನ್ ಬಿಟ್ಟು ತೆರಳದಂತೆ ತಾಲಿಬಾನ್ ತಡೆ!
15ನೇ ಹಣಕಾಸು ಆಯೋಗವು ತನ್ನ ಶಿಫಾರಸ್ಸಿನಲ್ಲಿ ರಾಜ್ಯ ನಿರ್ದಿಷ್ಟ ಅನುದಾನದಡಿ ರಾಜ್ಯಕ್ಕೆ ಬೆಂಗಳೂರಿನ ಜಲಮೂಲಗಳು ಹಾಗೂ ಪೇರಿಫೆರಲ್ ರಿಂಗ್ ರಸ್ತೆಗೆ 6000 ಕೋಟಿ ರೂ. ನಿಗದಿಪಡಿಸಿದೆ. ಆದರೆ ಭಾರತ ಸರ್ಕಾರದ ಎಕ್ಸಪ್ಲೆನೇಟರಿ ಮೆಮೊರಂಡಂ ನಲ್ಲಿ ಹಣಕಾಸು ಆಯೋಗ ಈ ಶಿಫಾರಸನ್ನು ಪ್ರಸ್ತಾಪಿಸಿಲ್ಲ. ಇದರಿಂದ ಮೊದಲೇ ತೆರಿಗೆ ಹಂಚಿಕೆಯಲ್ಲಿ ಇಳಿಕೆಯಾಗಿರುವ ರಾಜ್ಯಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ ಎಂದರು.
ಮಾಹಿತಿ ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಾಧ್ಯವಾಗುವುದು. ಆದ್ದರಿಂದ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರು ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಿಎಂ ಮನವಿ ಮಾಡಿದರು.