Advertisement

ಶುಕ್ರವಾರ ಕರ್ಫ್ಯೂ ಭವಿಷ್ಯ, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆ : ಸಿಎಂ ಸೂಚನೆ

08:30 PM Jan 18, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಹಾಗೂ ನೈಟ್‌ ಕರ್ಫ್ಯೂ ಮುಂದುವರಿಕೆ ಕುರಿತು ಶುಕ್ರವಾರ ನಡೆಯುವ ಪ್ರಮುಖರ ಸಭೆಯಲ್ಲಿ ನಿರ್ಧರಿಸಲು ಸರ್ಕಾರ ತೀರ್ಮಾನಿಸಿದೆ.

Advertisement

ರಾಜ್ಯಾದ್ಯಂತ ಕೊವಿಡ್‌ ನಿಯಂತ್ರಣಕ್ಕೆ ಲಿಸಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆಗಾರರನ್ನಾಗಿ ಮಾಡುವುದಾಗಿ ಸಿಎಂ ತಾಕೀತು ಮಾಡಿದ್ದಾರೆ.

ಮಂಗಳವಾರ ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳುರು ಗ್ರಾಮಾಂತರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೀದರ, ತುಮಕೂರು, ಚಿತ್ರದುರ್ಗ, ಕೋಲಾರ, ವಿಜಯಪುರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದರು.

ಜಿಲ್ಲೆಗಳಲ್ಲಿ ಸೀತ, ಕೆಮ್ಮು, ಜ್ವರ ಸೇರಿದಂತೆ ಸಾಮಾನ್ಯ ಖಾಯಿಲೆಗಳಿಗೆ ತಪಾಸಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆ (ಒಪಿಡಿ) ವ್ಯವಸ್ಥೆಯನ್ನು ಬಲಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಲು ಹೆಚ್ಚಿನ ಆದ್ಯತೆ ನೀಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡುವುದರ ಜೊತೆಗೆ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕು. 15-18 ವರ್ಷದ ಮಕ್ಕಳಿಗೆ ಲಸಿಕೆ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಬೇಕು. ಮತ್ತು ಚಿಕ್ಕ ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಒಂದು ವೇಳೆ, ಲಸಿಕೆ ಹಾಕಿಸುವಲ್ಲಿ ನಿರ್ಲಕ್ಷ್ಯ ಉಂಟಾದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊವಿಡ್‌ ಸೋಂಕಿನಿಂದ ಬಳಲುತ್ತಿದ್ದು ಹೋಂ ಐಸೋಲೇಷನ್‌ನಲ್ಲಿ ಇರುವವರ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಸಿಎಂ ಸೂಚಿಸಿದ್ದಾರೆ. ಕೊವಿಡ್‌ 2ನೇ ಅಲೆಯಲ್ಲಿ ಆಕ್ಸಿಜನ್‌ ಸಮಸ್ಯೆಯಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ಬಾರಿ ಆ ರೀತಿಯ ಸಮಸ್ಯೆಯಾಗದಂತೆ ಆಕ್ಸಿಜನ್‌ ಸಂಗ್ರಹ ಮಾಡಿಕೊಳ್ಳುವಂತೆಯೂ ಸಿಎಂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕರ್ನಾಟಕದಲ್ಲಿ ಪರೀಕ್ಷೆಗಳು ಹೆಚ್ಚಾಗಿರುವುದರಿಂದ ಪ್ರಕರಣಗಳು ಹೆಚ್ಚಿದ್ದರೂ ಕೋವಿಡ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುನ್ನೆಚ್ಚರಿಕಾ ಕ್ರಮಗಳು ಉತ್ತಮವಾಗಿದ್ದರೆ ಕೋವಿಡ್‌ ಮೂರನೇ ಅಲೆ ಏರುಗತಿ ತಲುಪಿದರೂ ಆತಂಕ ಪಡದೆ ಯಶಸ್ವಿಯಾಗಿ ಮೂರನೇ ಅಲೆ ನಿಭಾಯಿಸಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಸಿಎಂ ನೀಡಿರುವ ಪ್ರಮುಖ ಸೂಚನೆಗಳು :
– ಮೊದಲನೇ ಹಾಗೂ 2 ನೇ ಡೋಸ್‌ ಲಸಿಕೆ ಪ್ರಮಾಣದಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳು ತಿಂಗಳ ಅಂತ್ಯದೊಳಗೆ ರಾಜ್ಯ ಸರಾಸರಿಯನ್ನು ತಲುಪಬೇಕು.

– ಪ್ರತಿ ಗ್ರಾಮದ ಕಟ್ಟಕಡೆಯ ಮನೆಗೂ ಔಷಧ ಕಿಟ್‌ ಗಳನ್ನು ತಲುಪಿಸಬೇಕು. ಹೋಮ್‌ ಐಸೋಲೇಶನ್‌ನಲ್ಲಿರುವವರಿಗೆ ಸರಿಯಾದ ಚಿಕಿತ್ಸೆ ನೀಡಬೇಕು.

– ಜಿಲ್ಲಾಧಿಕಾರಿಗಳು, ಡಿ.ಹೆಚ್‌.ಒ ಗಳು ತಾಲ್ಲೂಕುಗಳಿಗೆ ಭೇಟಿ ನೀಡಿ ಔಷಧ ವಿತರಣೆಯ ಬಗ್ಗೆ ಪರಿಶೀಲಿಸಬೇಕು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಬೇಕು.

– ಪ್ರಯೋಗಾಲಯದ ವರದಿ ಬಂದ ತಕ್ಷಣ ಟೆಲಿ ಟ್ರಯಾಜಿಂಗ್‌ ಮಾಡಬೇಕು.

– ಶೇ 94% ರಷ್ಟು ಸೋಂಕಿತರು ಹೋಮ್‌ ಐಸೋಲೇಶನ್‌ ಇರುವುದರಿಂದ ಮನೆಯವರಿಗೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಸೋಂಕಿತರ ಮನೆಯವರಿಗೂ ಪರೀಕ್ಷೆ ಮಾಡಿ ಅಗತ್ಯವಿದ್ದರೆ ಚಿಕಿತ್ಸೆ ನೀಡಬೇಕು.

– ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಿ ವೈದ್ಯರು ಹಾಗೂ ಎ. ಎನ್‌.ಎಂ ಗಳು ಮನೆ ಮನೆ ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಎಸ್‌.ಒ. ಪಿ ರೂಪಿಸಲು ನಿರ್ಧಾರ

– ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಒ.ಪಿ.ಡಿಗಳನ್ನು ಬಲಪಡಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಒಪಿಡಿಗಳನ್ನು ತೆರೆಯಲು ಕ್ರಮ

– ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ರಾಜ್ಯದ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ಹಾಗೂ ಚಿಕಿತ್ಸೆ ಕುರಿತು ವಿಶೇಷ ಎಸ್‌.ಒ.ಪಿ ಜಾರಿ

– ಎಲ್ಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಕೋ- ಮಾರ್ಬಿಡಿಟಿ ಇರುವವರನ್ನು ಗುರುತಿಸಿ, ಹೋಮ್‌ ಐಸೋಲೇಶನ್‌ ನಲ್ಲಿರುವವರಿಗೆ ಟೆಸ್ಟ್‌ ಮಾಡಿ ಚಿಕಿತ್ಸೆ ನೀಡಬೇಕು.

– ಕೋ- ಮಾರ್ಬಿಡಿಟಿ ಇರುವವರು ಹಾಗೂ 60 ವರ್ಷಗಳಿಗೂ ಮೇಲ್ಪಟ್ಟವರಿಗೆ ಪರೀಕ್ಷೆಗಳನ್ನು ಹೆಚ್ಚಿಸಿ ಔಷಧಿ ಒದಗಿಸಬೇಕು.

– ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಬೇಕು

– ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಅಭಿಯಾನ ಕೈಗೊಳ್ಳಬೇಕು.

– ಲಸಿಕೆ ಪಡೆದು 90 ದಿನ ಪೂರೈಸಿರುವವರ ಪಟ್ಟಿ ತಯಾರಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಸಿಕೆ ಕಾರ್ಯಕ್ರಮದ ಮೇಲ್ವಿಚಾರಣೆಯ ಜವಾಬ್ದಾರಿ ನೀಡಲು ಸೂಚನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next