Advertisement

ಗ್ರಾಹಕರ ಮನ ಗೆದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆ: ಸಿಎಂ ಬೊಮ್ಮಾಯಿ

11:16 PM Jan 26, 2023 | Team Udayavani |

ಬೆಂಗಳೂರು: ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬಟ್ಟೆಗಳಿಗೆ ಬಣ್ಣ, ವಿನ್ಯಾಸವನ್ನು ಬದಲಾಯಿಸಿಕೊಂಡರೆ ಖಾದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದ್ದ “ಖಾದಿ ಉತ್ಸವ-2023′ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಬೆಳೆದಂತೆ ಪಾಲಿಸ್ಟರ್‌ ಉತ್ಪಾದನೆಯಿಂದಾಗಿ ಖಾದಿಯ ಬೇಡಿಕೆ ಕುಸಿದಿತ್ತು. ಆದರೆ ಇಂದಿನ ಬಣ್ಣ, ವಿನ್ಯಾಸದ ಬದಲಾವಣೆ ಪರಿಣಾಮವಾಗಿ ಖಾದಿ ವಸ್ತ್ರ ಉತ್ಪಾದನೆಗೆ ಹೆಚ್ಚಿನ ಬೇಡಿಕೆಯಿದೆ ಎಂದರು.

ವಿಶೇಷವಾಗಿ ಸಂಘ-ಸಂಸ್ಥೆಗಳು, ಸಣ್ಣ ಮಾರುಕಟ್ಟೆಗಳು ಡಿಜಿಟಲ್‌ ಮಾರುಕಟ್ಟೆಯನ್ನು ಉಪಯೋಗಿಸಿಕೊಳ್ಳಬೇಕಿದೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಈಗಾಗಲೇ ಸ್ತ್ರೀಶಕ್ತಿ ಸಂಘಗಳು, ನೇಕಾರರು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಸರಕಾರವು ಎಂಒಯು ಮಾಡಿಕೊಂಡಿದೆ. ಉತ್ಪಾದಕರಿಂದ ನೇರವಾಗಿ ಮಧ್ಯವರ್ತಿಗಳಿಲ್ಲದೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಎರಡು ವರ್ಷಗಳಿಂದ ಬಾಕಿ ಇರುವ 24 ಕೋಟಿ ರೂ.ಪ್ರೋತ್ಸಾಹಧನವನ್ನು ನೀಡಲು ಅನು ಮೋದನೆ ಕೊಟ್ಟು, ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಗ್ರಾಮೀಣ ಜನರ ಕೈಗೆ ಕೆಲಸ ನೀಡುವುದು ಮಹಾತ್ಮಾ ಗಾಂಧಿ ಕನಸಾಗಿತ್ತು. ಇಂದು ರಾಜ್ಯಾದ್ಯಂತ 172 ಖಾದಿ ಸಂಸ್ಥೆಗಳಿದ್ದು, 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ಸಂರಕ್ಷಿಸಲು ಹಾಗೂ ಕಚೇರಿ ಯನ್ನು ಸ್ಥಾಪಿಸಲು 5 ಕೋಟಿ ರೂ.ಬಿಡುಗಡೆ ಮಾಡಬೇಕಿದೆ. ಜತೆಗೆ ಸಿಬಂದಿ ಕೊರತೆ ನೀಗಿಸಲು ಸಹಕಾರದ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next