ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಂದಿನ ಗುರುವಾರ ( ಸೆ.17) ಹೊಸದಿಲ್ಲಿಗೆ ತೆರಳಲಿದ್ದಾರೆ. ಸಿಎಂ ಬಿಎಸ್ ವೈ ದಿಲ್ಲಿ ಪ್ರವಾಸ ಸಚಿವ ಸ್ಥಾನದ ಆಕಾಂಕ್ಷಿಗಳು ಸೇರಿದಂತೆ ಹಲವರು ಕುತೂಹಲಕ್ಕೆ ಕಾರಣವಾಗಿದ್ದು, ರಾಜಕೀಯ ಚಟುವಟಿಕೆಗಳಿಗೆ ಪುಷ್ಠಿ ನೀಡಲಿದೆ.
ಸೆ.17ರಂದು ಕಲಬುರಗಿಗೆ ಭೇಟಿ ನೀಡಲಿರುವ ಸಿಎಂ, ಅಂದು ಸಂಜೆ ಕಲಬುರಗಿಯಿಂದಲೇ ವಿಶೇಷ ವಿಮಾನದಲ್ಲಿ ದಿಲ್ಲಿಗೆ ತೆರಳಿಲಿದ್ದಾರೆ.
ಸಿಎಂ ಬಿಎಸ್ ವೈ ಒಟ್ಟು ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಇದರೊಂದಿಗೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ.
ಇದರೊಂದಿಗೆ 8,000 ಕೋಟಿ ರೂ. ನೆರೆ ಹಾನಿ ನಷ್ಟ ಪರಿಹಾರವನ್ನೂ ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ. ಅಲ್ಲದೆ ರಾಜ್ಯದ ಜಿಎಸ್ ಟಿ ಪಾಲಿನ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣ: ಆನ್ ಲೈನ್ ಮೂಲಕ ಭೂಮಿಪೂಜೆಯಲ್ಲಿ ಭಾಗವಹಿಸಿದ ಬಿಎಸ್ ವೈ
ಇದಕ್ಕಿಂತ ಹೆಚ್ಚಾಗಿ ಪ್ರವಾಸದ ಕೇಂದ್ರ ಬಿಂದುವಾಗಿರುವುದು ಸಚಿವ ಸಂಪುಟ ವಿಸ್ತರಣೆ ವಿಚಾರ. ಸಿಎಂ ಹೈಕಮಾಂಡ್ ಭೇಟಿಗೆ ತೆರಳುವಾಗ ಸಚಿವ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿ ಕೊಂಡೊಯ್ಯಲಿದ್ದಾರೆ ಎನ್ನಲಾಗಿದೆ. ಈ ಪಟ್ಟಿಗೆ ಹೈಕಮಾಂಡ್ ಎನ್ನನ್ನುತ್ತದೆ ಎನ್ನುವುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.