Advertisement

ರಾಜಸ್ಥಾನ ಬಿಕ್ಕಟ್ಟಿಗೆ ಅಶೋಕ್ ಗೆಹ್ಲೋಟ್ ಕಾರಣ ಅಲ್ಲ

10:02 PM Sep 27, 2022 | Team Udayavani |

ನವದೆಹಲಿ/ಜೈಪುರ:“ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯದೇ ಇರುವ ವಿಚಾರದಲ್ಲಿ ಮತ್ತು ಸದ್ಯ ಉಂಟಾಗಿರುವ ಬಿಕ್ಕಟ್ಟಿನಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪಾತ್ರ ಇಲ್ಲ. ಆದರೆ, ಅವರ ಗುಂಪಿನ ಮೂವರು ಶಾಸಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು’

Advertisement

– ಹೀಗೆಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ಮುಖಂಡ ಅಜಯ್‌ ಮಕೇನ್‌ ಲಿಖಿತ ವರದಿ ಕೊಟ್ಟಿದ್ದಾರೆ.

ಜತೆಗೆ ಕಾಂಗ್ರೆಸ್‌ನ ಇತರ ಮುಖಂಡರು ಬಿಕ್ಕಟ್ಟು ಶಮನಕ್ಕೆ ಅವರ ಜತೆಗೆ ಮಾತುಕತೆಗೂ ಮುಂದಾಗಿದ್ದಾರೆ.

ಹೀಗಾಗಿ, ಕಾಂಗ್ರೆಸ್‌ ವರಿಷ್ಠರು ರಾಜಸ್ಥಾನ ಸಿಎಂ ಗೆಹ್ಲೋಟ್ ಒತ್ತಡಕ್ಕೆ ಮಣಿದಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿರುವ ಶಾಂತಿ ಧರಿವಾಲ್‌, ಮಹೇಶ್‌ ಜೋಶಿ, ಶಾಸಕ ಧರ್ಮೇಂದ್ರ ರಾಥೋಡ್‌ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಕೆಲವು ನಾಯಕರು ಅಂಕೆ ಮೀರಿ ವರ್ತಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಾಸಕಾಂಗ ಸಭೆಗೆ ಪರ್ಯಾಯವಾಗಿ ಕೆಲವು ನಾಯಕರು ಸಭೆ ನಡೆಸಿರುವುದು ಆಕ್ಷೇಪಾರ್ಹ ಎಂದು ಅಭಿಪ್ರಾಯಪಡಲಾಗಿದೆ. ಅಚ್ಚರಿಯ ವಿಚಾರವೆಂದರೆ, ವರದಿಯಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್ ಅವರ ಪಾತ್ರದ ಬಗ್ಗೆ ಉಲ್ಲೇಖವೇ ಮಾಡದೆ ಮೌನ ವಹಿಸಲಾಗಿದೆ.

Advertisement

ಗೆಹ್ಲೋಟ್ ಜತೆ ಚರ್ಚೆ:
ಶಾಸಕ ಸಚಿನ್‌ ಪೈಲಟ್‌ಗೆ ಸಿಎಂ ಹುದ್ದೆ ನೀಡಲೇಬಾರದು ಎಂದು ಪಟ್ಟುಹಿಡಿದಿರುವ ಅಶೋಕ್‌ ಗೆಹ್ಲೋಟ್ ಜತೆಗೆ ಮಾಜಿ ಸಚಿವರಾದ ಅಂಬಿಕಾ ಸೋನಿ, ಆನಂದ ಶರ್ಮಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ ಅ.17ರ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗೆಹ್ಲೋಟ್ ಸ್ಪರ್ಧಿಸುವ ಸಾಧ್ಯತೆಯೇ ಅಧಿಕವಾಗಿದೆ.

ಕಣಕ್ಕೆ ಬನ್ಸಲ್‌?:
ಮತ್ತೊಂದು ಬೆಳವಣಿಗೆಯಲ್ಲಿ ಕೇಂದ್ರದ ಮಾಜಿ ಸಚಿವ ಪವನ್‌ ಕುಮಾರ್‌ ಬನ್ಸಲ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಇವೆ. ಬಿಕ್ಕಟ್ಟಿನ ನಡುವೆಯೂ ಸಿಎಂ ಅಶೋಕ್‌ ಗೆಹ್ಲೋಟ್ ಅವರು ಜೈಪುರದಲ್ಲಿ ತಮಗೆ ನಿಷ್ಠರಾಗಿರುವ ಶಾಸಕರು ಮತ್ತು ಸಚಿವರ ಜತೆಗೆ ಸಭೆ ನಡೆಸಿದ್ದಾರೆ.

ಅಶೋಕ್‌ ಗೆಹ್ಲೋಟ್ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಬೇಡ ಎಂದು ನಾನು ವರಿಷ್ಠರಿಗೆ ಹೇಳಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸುಳ್ಳು.
-ಸಚಿನ್‌ ಪೈಲಟ್‌, ಕಾಂಗ್ರೆಸ್‌ ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next