ಪುಣೆ, ಜು. 23: ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಮತ್ತು ಬಿರುವೆರ್ ಪುಣೆ ವೃಂದದ ವತಿಯಿಂದ ಸಮಾಜ ಬಾಂಧವರಕೂಡುವಿಕೆಯಲ್ಲಿ ಪ್ರಪ್ರಥಮ ಬಾರಿಗೆ ಆಟಿಡೂಂಜಿ ಕೂಟ ಆಚರಣೆಯು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜು. 28ರಂದು ಪೂರ್ವಾಹ್ನ 10ರಿಂದ ಸಂಜೆ 6.30ರವರೆಗೆ ಕರ್ವೆ ನಗರದ ಶ್ರೀಧರ ಕಾಲೊನಿಯಲ್ಲಿರುವ ಮಹಾಲಕ್ಷ್ಮೀ ಲಾನ್ಸ್‌ನಲ್ಲಿ ಜರಗಲಿದೆ.
ಬೆಳಗ್ಗೆ ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ, ಪುಣೆ ಬಿಲ್ಲವ ಸಂಘ ಸಂಸ್ಥಾಪಕ ಅಧ್ಯಕ್ಷ ಸುಂದರ್ ಪೂಜಾರಿ ಹಾಗೂ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅನಂತರ ಪುಣೆಯ ಬಿಲ್ಲವ ಸಮಾಜ ಬಾಂಧವರಿಂದ ವೈವಿಧ್ಯಮಯ ನೃತ್ಯಗಳು, ನೃತ್ಯ ರೂಪಕ, ಜಾನಪದ ನೃತ್ಯ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನ 12.30ರಿಂದ ತುಳುನಾಡಿನ ಹೆಸರಾಂತ ಜಾನಪದ ವಿದ್ವಾಂಸ, ಸಾಹಿತಿ, ಪ್ರವಚನಕಾರ ಬಾಬು ಅಮಿನ್ ಬನ್ನಂಜೆ ಅವರಿಂದ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲ್ಲಿದ್ದು, ಶ್ರೀ ವಿನಾಯಕ ಮಕ್ಕಳ ಮೇಳ ಕೆರೆಕಾಡು ಮೂಲ್ಕಿ ಇವರಿಂದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಅಪರಾಹ್ನ 3.30ರಿಂದ ಸಭಾ ಕಾರ್ಯಕ್ರಮವು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಬನ್ನಂಜೆ ಬಾಬು ಅಮಿನ್, ಪುಣೆ ಬಿಲ್ಲವ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸುಂದರ್ ಪೂಜಾರಿ ಹಾಗೂ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಇನ್ನ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ, ಪುಣೆ ರೆಸ್ಟೋರೆಂಟ್ ಅ್ಯಂಡ್ ಹೊಟೇಲಿಯರ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷರಾದ ಮೋಹನ್ ಶೆಟ್ಟಿ ಎಣ್ಣೆಹೊಳೆ, ಬಂಟ್ಸ್ ಅಸೋಸಿಯೇಶನ್ ಪುಣೆಯ ಅಧ್ಯಕ್ಷರಾದ ಆನಂದ ಶೆಟ್ಟಿ ಮಿಯ್ನಾರು, ಕಾತ್ರಜ್ ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷರಾದ ಸುಭಾಶ್ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಗಣೇಶ್ ಹೆಗ್ಡೆ, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಪಿಂಪ್ರಿ-ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್, ಪುಣೆ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ ಕುಲಾಲ್ ಮುಂಡ್ಕೂರು, ಪಿಂಪ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಆಗಮಿಸಲಿದ್ದಾರೆ.
ತುಳುನಾಡಿನಲ್ಲಿ ಅಟಿ ತಿಂಗಳಿಗೆ ಬಹಳ ವಿಶೇಷತೆಯಿದ್ದು, ವಿಶೇಷವಾಗಿ ಜನರ ಆಹಾರ ಪದ್ದತಿ, ಜಾನಪದ ಕಲೆ, ಸಂಸ್ಕೃತಿ, ಸಂಸ್ಕಾರಗಳ ಆಚರಣೆಗಳಿಗೆ ಬಹಳ ಮಹತ್ವವಿದೆ. ಈ ಎಲ್ಲಾ ಅಚಾರ ವಿಚಾರ, ತಿಂಡಿ-ತಿನಸುಗಳ ಬಗ್ಗೆ ಹೊರನಾಡಿನಲ್ಲಿರುವ ನಮ್ಮ ಸಮಾಜ ಬಾಂಧವರಿಗೆ, ಯುವ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಮತ್ತು ತಂಡದವರು ಆಯೋಜಿಸಲು ಮುಂದಾಗಿದ್ದಾರೆ. 30 ಕ್ಕಿಂತಲೂ ಮಿಕ್ಕಿದ ವಿವಿಧ ಬಗೆಯ ತುಳುನಾಡಿನ ತಿಂಡಿ-ತಿನಸುಗಳ ಜೊತೆಯಲ್ಲಿ ಜಾನಪದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ವೈಭವ, ಜಾನಪದ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ಸಮಾಜದ ಗಣ್ಯರು, ಸಮಾಜ ಬಾಂಧವರ ಕೂಡುವಿಕೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮುಖ್ಯ ಆಯೋಜಕರಾದ ವಿಶ್ವನಾಥ್ ಪೂಜಾರಿ ಕಡ್ತಲ ಹಾಗು ವೃಂದದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.