Advertisement

ಆತಂಕದ ನಡುವೆ ಇಂದು ಸಿಎಲ್‌ಪಿ ಸಭೆ; ಕೆಲವು ಶಾಸಕರು ಗೈರು ?

12:55 AM Jan 18, 2019 | |

ಬೆಂಗಳೂರು: ಆಪರೇಷನ್‌ ಕಮಲ ಯತ್ನಕ್ಕೆ ಬ್ರೇಕ್‌ ಹಾಕಿದ ಖುಷಿಯಲ್ಲಿರುವ ಕಾಂಗ್ರೆಸ್‌ಗೆ
ಶುಕ್ರವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆ ಈಗ ಅತ್ಯಂತ ಮಹತ್ವದ್ದಾಗಿದೆ. ಕಡ್ಡಾಯವಾಗಿ ಹಾಜ ರಾಗಲೇಬೇಕು ಎಂದು ಸೂಚನೆ ನೀಡಿದ್ದರೂ ಹತ್ತಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಅತೃಪ್ತರ ಹಾಜರಿಯ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

Advertisement

ಅತೃಪ್ತಗೊಂಡು ಮುಂಬಯಿಗೆ ತೆರಳಿ ವಾಸ್ತವ್ಯ ಹೂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ ಅಲ್ಲಿಯೇ ಇದ್ದಾರೆ. ಬಿಜೆಪಿಯ ಆಪರೇಷನ್‌ ಕಮಲದ ಪಟ್ಟಿಯಲ್ಲಿರುವ ಬಹುತೇಕ ಶಾಸಕರನ್ನು ವಾಪಸ್‌ ಕರೆಯಿಸಿ ಸಮಾಧಾನಪಡಿಸಿ ನಿಟ್ಟುಸಿರು ಬಿಟ್ಟಿರುವ ಕಾಂಗ್ರೆಸ್‌ಗೆ ಶಾಸಕಾಂಗ ಪಕ್ಷದ ಸಭೆ ವಾಸ್ತವ ಚಿತ್ರಣ ಬಿಂಬಿಸುವ ವೇದಿಕೆ ಯಾಗಲಿದೆ.

ರಮೇಶ್‌ ಜಾರಕಿಹೊಳಿಯೊಂದಿಗೆ ಗುರುತಿಸಿ ಕೊಂಡು ಈಗಾಗಲೇ ಬಿಜೆಪಿಯ ಆಪರೇಷನ್‌ ಕಮಲದ ಪಟ್ಟಿಗೆ ಸೇರಿರುವ ಅನೇಕ ಶಾಸಕರು ಅನಾರೋಗ್ಯ ಮತ್ತಿತರ ಕಾರಣಗಳನ್ನು ಮುಂದಿಟ್ಟು ಶುಕ್ರವಾರದ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿ ಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅಕ್ರಮ ಗಣಿಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೋರ್ಟ್‌ಗೆ 
ಹಾಜರಾಗಲು ಬೆಂಗಳೂರಿಗೆ ಆಗಮಿಸಿದ್ದು, ಶುಕ್ರವಾರವೂ ಕೋರ್ಟ್‌ ಕಲಾಪದಲ್ಲಿ ಪಾಲ್ಗೊಳ್ಳ ಬೇಕಿರುವುದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಚಿಂಚೊಳ್ಳಿ ಶಾಸಕ ಉಮೇಶ್‌ ಜಾಧವ್‌ ಮುಂಬಯಿಯಿಂದ ಹೊರಟಿದ್ದಾರೆ ಎಂದು ಹೇಳಲಾಗಿದೆ. ಅವರು ಹೈದರಾಬಾದ್‌ ಮೂಲಕ ಬೆಂಗಳೂರಿಗೆ ಆಗಮಿಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ. ಹಿರೆಕೆರೂರ್‌ ಶಾಸಕ ಬಿ.ಸಿ. ಪಾಟೀಲ್‌ ಮಗಳ ಮದುವೆಯ ನೆಪ ಒಡ್ಡಿ ಶಾಸಕಾಂಗ ಪಕ್ಷದ ಸಭೆಯಿಂದ ನುಣುಚಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಾವು ಯಾವುದೇ ರೀತಿಯ ಆಪರೇಷನ್‌ ಮಾಡುತ್ತಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಸೆಳೆಯುತ್ತಿಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ.  ಗುಜರಾತ್‌ ಶಾಸಕರನ್ನು ಬೆಂಗಳೂರಿನಲ್ಲಿ ಇಟ್ಟಿದ್ದಾಗ ಎಲ್ಲಿ ಹೋಗಿತ್ತು ಕಾಂಗ್ರೆಸ್‌ನವರ ಪ್ರಜಾಪ್ರಭುತ್ವ?
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿಯವರು ಮೈತ್ರಿ ಸರಕಾರವನ್ನು ಪತನಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಪಾಲರ ಆಡಳಿತ ಜಾರಿಯಾಗಲಿದೆ ಎಂದು ಬಿಂಬಿಸಲಾಯಿತು. ಆದರೆ ಬಿಜೆಪಿಯ ಯಾವ ತಂತ್ರವೂ ಫ‌ಲಿಸಲಿಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

ಸಿಎಂ ಆಗಲು, ಮಾನ-ಮರ್ಯಾದೆ ಬಿಟ್ಟು ಯಡಿಯೂರಪ್ಪ 3ನೇ ಬಾರಿ ವಿಫಲರಾಗುತ್ತಿದ್ದಾರೆ. ಅವರ ಶಾಸಕರನ್ನು ಹರಿಯಾಣದಲ್ಲಿ ಏಕೆ ಕೂಡಿ ಇಟ್ಟಿದ್ದಾರೆ.
ಸಿದ್ದರಾಮಯ್ಯ, ಮಾಜಿ ಸಿಎಂ

ಅನುಮಾನ ಯಾರ ಮೇಲೆ?
ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಠಳ್ಳಿ ಅವರನ್ನು ಹೊರತುಪಡಿಸಿ, ಪ್ರತಾಪ್‌ಗೌಡ ಪಾಟೀಲ್‌, ಬಿ. ನಾಗೇಂದ್ರ, ಉಮೇಶ್‌ ಜಾಧವ್‌, ಬಸನಗೌಡ ದದ್ಧಲ್‌, ಶಿವರಾಮ್‌ ಹೆಬ್ಟಾರ್‌, ಶ್ರೀಮಂತ ಪಾಟೀಲ್‌, ಆನಂದ ಸಿಂಗ್‌, ಭೀಮಾ ನಾಯ್ಕ, ಜೆ.ಎನ್‌. ಗ‌ಣೇಶ್‌ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ, ಜನವರಿ 19ರಂದು ಮತ್ತೆ ಮುಂಬಯಿ ಅತೃಪ್ತರ ತಂಡ ಸೇರುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಬಿಜೆಪಿ ಪ್ರಯತ್ನ ಮುಂದುವರಿಕೆ
ನಾಯಕರ ಮನವೊಲಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲೇ ಇರುತ್ತೇವೆ ಎಂದು ಹೇಳಿರುವ ಕಾಂಗ್ರೆಸ್‌ ಶಾಸಕರಲ್ಲಿ ನಾಲ್ವರನ್ನು ಸಚಿವ ಸ್ಥಾನದ ಭರವಸೆ ನೀಡಿ ವಾಪಸ್‌ ಕರೆಸಲಾಗಿದೆ ಎನ್ನಲಾಗಿದೆ. ಆದರೆ 
ನಿಮ್ಮನ್ನು ಸಚಿವರನ್ನಾಗಿ ಮಾಡುವುದಿಲ್ಲ. 

ಸುಮ್ಮನೆ ಆಸೆ ಹುಟ್ಟಿಸಿದ್ದಾರೆ. ಲೋಕಸಭೆ ಚುನಾವಣೆವರೆಗೂ ಹೀಗೇ ಮುಂದೂಡುತ್ತಾರೆ. ನಮ್ಮ ಜತೆ ಬನ್ನಿ ಎಂದು ಈಗಲೂ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್‌ ಶಾಸಕರ ಬೆನ್ನು ಬಿದ್ದಿದ್ದಾರೆ. ಹೀಗಾಗಿಯೇ ಶಾಸಕಾಂಗ ಪಕ್ಷದ ಸಭೆ ನಡೆಯಲಿ, ಆಮೇಲೆ ನೋಡೋಣ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next