ಡೆಹ್ರಾಡೂನ್: ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟಗಳಲ್ಲಿ ಇಬ್ಬರು ಮೃತಪಟ್ಟು ಐವತ್ತಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮೇಘಸ್ಫೋಟದ ಹಿನ್ನೆಲೆಯಲ್ಲಿ ಉತ್ತರಾಖಂಡದ ಕೇದಾರನಾಥ ಮತ್ತು ಹಿಮಾಚಲ ಪ್ರದೇಶದ ಶಿಮ್ಲಾದ ಸಮಾಜ್ ಖಾಡ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಉತ್ತರಾಖಂಡದ ತೆಹ್ರಿ ಜಿಲ್ಲೆಯ ಗಂಜಾಲಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೃತರನ್ನು ಭಾನು ಪ್ರಸಾದ್ (50) ಮತ್ತು ಅವರ ಪತ್ನಿ ನೀಲಂ ದೇವಿ (45) ಎಂದು ಗುರುತಿಸಲಾಗಿದೆ.
ನೌತರ್ ಹೊಳೆ ಬಳಿಯ ರೆಸ್ಟೋರೆಂಟ್ ಮತ್ತು ಕಲ್ವರ್ಟ್ ನೀರಿನಲ್ಲಿ ಕೊಚ್ಚಿ ಹೋಗಿ ಸಾವು ಸಂಭವಿಸಿದೆ ಎನ್ನಲಾಗಿದ್ದು. ಈ ಪ್ರದೇಶದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಏಕಾಏಕಿ ಸುರಿದ ಭಾರಿ ಮಳೆಗೆ ಮಂದಾಕಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ. ಅಲ್ಲದೆ ಕೇದಾರನಾಥದಲ್ಲಿ ಸುಮಾರು 200 ಯಾತ್ರಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಬ್ಬರ ಮೃತದೇಹ ಶಿಮ್ಲಾದ ಸಮಾಜ ಖಾಡ್‌ನಲ್ಲಿ ಪತ್ತೆಯಾಗಿದೆ. ಹಲವು ಮನೆಗಳು ಧ್ವಂಸಗೊಂಡಿವೆ. ಅಪ್ಪಾಡೆ ಕುಲುವಿನ ಪಾರ್ವತಿ ನದಿಯಲ್ಲಿ ಕಟ್ಟಡವೊಂದು ಕುಸಿದು ಕೊಚ್ಚಿ ಹೋಗಿದೆ. ಕುಲು, ಸೋಲನ್, ಸಿರ್ಮೌರ್, ಶಿಮ್ಲಾ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದ ಸಾಧ್ಯತೆಯ ಬಗ್ಗೆ ಹವಾಮಾನ ಕೇಂದ್ರ ಎಚ್ಚರಿಕೆಯನ್ನೂ ನೀಡಿದೆ.
ಕೇದಾರನಾಥದಲ್ಲಿ, ಭೀಮ್ ಬಾಲಿ ಹೊಳೆ ಬಳಿ ಸಂಭವಿಸಿದ ಭೂಕುಸಿತದಿಂದ ಸುಮಾರು 25 ಮೀಟರ್ ಪಾದಚಾರಿ ಮಾರ್ಗವನ್ನು ನಾಶವಾಗಿದೆ. ಪರಿಣಾಮ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ಸುಮಾರು 200 ಯಾತ್ರಾರ್ಥಿಗಳು ಭೀಮ್ ಬಾಲಿಯಲ್ಲಿ ಸಿಲುಕಿಕೊಂಡರು.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಂದಾಕಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿದ ಹಿನ್ನೆಲೆಯಲ್ಲಿ ಗೌರಿಕುಂಡ್ ದೇವಸ್ಥಾನದಿಂದ ಯಾತ್ರಾರ್ಥಿಗಳನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಕಾರ್ಯಾಚರಣೆ ನಡೆಸುತ್ತಿದ್ದು ಆಸ್ಪತ್ರೆಗಳು ಸೇರಿದಂತೆ ತುರ್ತು ವಿಭಾಗಗಳನ್ನು ವ್ಯವಸ್ಥೆ ಗೊಳಿಸುವಂತೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಪತ್ತು ನಿರ್ವಹಣಾ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ದೃಷ್ಟಿಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು.